ಬೆಂಗಳೂರು: ನೂತನವಾಗಿ ಆಯ್ಕೆಯಾದ ಮೇಯರ್ ಮತ್ತು ಡೆಪ್ಯುಟಿ ಮೇಯರ್ ನಗರದಲ್ಲಿ ಸುರಿಯುತ್ತಿರುವ ಮಳೆ ಅನಾಹುತದ ಬಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ವಿಚಾರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಬಿಬಿಎಂಪಿ ಪಶ್ಚಿಮ ವಲಯದ (ಮಂತ್ರಿ ಮಾಲ್ ಎದುರು) ನಿಯಂತ್ರಣ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದಾಗ, ಅಲ್ಲಿನ ಪರಿಸ್ಥಿತಿ ಕಂಡು ಬಿಬಿಎಂಪಿ ಅಧಿಕಾರಿ ವಿರುದ್ಧ ಮೇಯರ್ ಗರಂ ಆದರು. ಬೆಂಗಳೂರಿನಲ್ಲಿ ಸುರಿಯುತ್ತಿರುವ ಬಾರಿ ಮಳೆಯ ಕಾರಣ ಅಧಿಕಾರಿ, ಸಿಬ್ಬಂದಿ ವರ್ಗ ತುರ್ತು ಕೆಲಸಕ್ಕೆ ಜಾಗೃತರಾಗಿರಬೇಕೆಂದು ಎಚ್ಚರಿಸಿದರು. ಕಂಟ್ರೋಲ್ ರೂಮ್ನಲ್ಲಿ ಅರಣ್ಯ ವಿಭಾಗದ ಅಧಿಕಾರಿ ಗೈರ್ ಆಗಿದ್ದನ್ನು ಕಂಡು ಮೇಯರ್ ಗೌತಮ್ ಕುಮಾರ್ ಅಧಿಕಾರಿಯನ್ನ ತರಾಟೆ ತೆಗೆದುಕೊಂಡರು.
ಇನ್ನೂ, ಮೇಯರ್ ಗೌತಮ್ ಕುಮಾರ್ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ಸಹಾಯವಾಣಿಗೆ ಭೇಟಿ ನೀಡಿದ್ದು, ಈ ವೇಳೆ, ತಾವೇ ಸ್ವತಃ ಸಾರ್ವಜನಿಕರ ಕರೆ ಸ್ವೀಕರಿಸಿ, ಮಳೆ ಅನಾಹುತದ ಬಗ್ಗೆ ಜನರ ಕುಂದು ಕೊರತೆಗಳನ್ನು ವಿಚಾರಿಸಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಇವರಿಗೆ ಉಪಮೇಯರ್ ರಾಮ್ ಮೋಹನ್ ರಾಜು ಸಾಥ್ ನೀಡಿ, ಸಿಬ್ಬಂದಿಗಳಿಗೆ ಸೂಚನೆ ನೀಡಿದರು.