ಯಲಹಂಕ (ಬೆಂಗಳೂರು): ವಿವಾದಿತ ವೀರ ಸಾವರ್ಕರ್ ಮೇಲ್ಸೇತುವೆಯನ್ನು ಕೊನೆಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದ್ದಾರೆ.
ಯಲಹಂಕದ ಡೈರಿ ಸರ್ಕಲ್ ಬಳಿಯ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಸಿಎಂ, ನಗರೋತ್ತನ ಯೋಜನೆಯಡಿ 36 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗಿದೆ. ವೀರ ಸಾರ್ವಕರ್ ತಮ್ಮ ಸಂಪೂರ್ಣ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮುಡುಪಿಟ್ಟಿದ್ದರು. ದೇಶಭಕ್ತರ ಹೆಸರನ್ನು ಸೇತುವೆಗೆ ಇಟ್ಞಿರುವುದು ಸೂಕ್ತವಾಗಿದೆ ಎಂದರು.
ಚತುಷ್ಪಥ ಮೇಲ್ಸೇತುವೆ ಎರಡು ಬದಿ ಸೇವಾ ರಸ್ತೆಯನ್ನು ಹೊಂದಿದೆ. ಈ ಮೇಲ್ಸೇತುವೆ ಬೆಂಗಳೂರಿನ ಪಶ್ಚಿಮ ಭಾಗದಲ್ಲಿನ ಹೆಸರಘಟ್ಟ, ಮಾದನಾಯಕನಹಳ್ಳಿ, ಯಶವಂತಪುರ, ಗೊರಗುಂಟೆಪಾಳ್ಯದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಪರ್ಯಾಯ ರಸ್ತೆಯಾಗಲಿದೆ.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿಗೆ 7,300ಕೋಟಿ ಅನುದಾನ ನೀಡಲಾಗಿದೆ. ಮೂಲಭೂತ ಸೌಕರ್ಯ, ಸುಗಮ ರಸ್ತೆ ಸಂಚಾರ, ಘನತ್ಯಾಜ್ಯ ವಿಲೇವಾರಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಮುಖ 36 ರಸ್ತೆಗಳ 30 ಕಿ.ಮೀ ರಸ್ತೆಯನ್ನ ಸ್ಮಾರ್ಟ್ ರಸ್ತೆಯನ್ನಾಗಿ ಮಾಡಲಾಗುವುದು. ಯಲಹಂಕ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿ ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದರು.
ಸ್ಥಳೀಯ ಶಾಸಕ ವಿಶ್ವನಾಥ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಇತಿಹಾಸ ಒಳಗೊಂಡ 3 ಸಾವಿರ ಪುಸ್ತಕ ಬಿಡುಗಡೆ ಮಾಡಿದ್ದು, ಸಾರ್ವಕರ್ ಇತಿಹಾಸ ತಿಳಿಯದವರು ವಿರೋಧ ಮಾಡುತ್ತಿದ್ದಾರೆ. ಇತಿಹಾಸ ಗೊತ್ತಿಲ್ಲದವರು ಪುಸ್ತಕ ಓದಿ ತಿಳಿದುಕೊಳ್ಳಬೇಕು. ಯಲಹಂಕದಲ್ಲಿ ಇನ್ನೂ ನಾಲ್ಕು ಮೇಲ್ಸೇತುವೆ ನಿರ್ಮಾಣವಾಗಲಿದ್ದು, ಜನಾಭಿಪ್ರಾಯದ ಮೆಲೆ ಆ ಮೇಲ್ಸೇತುವೆಗಳಿಗೆ ದೇಶಭಕ್ತರ ಹೆಸರಿಡಲಾಗುವುದು ಎಂದರು.