ಬೆಂಗಳೂರು: ಆರ್ ಎಸ್ಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕೊಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೈಸೂರು ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
39 ವರ್ಷದ ಅತೀಕ್ ಶರೀಫ್ ಆಲಿಯಾಸ್ ಟಿಂಬರ್ ಅತೀಕ್ ಬಂಧಿತ ಆರೋಪಿ. 2009 ರಿಂದ 2016 ರವರೆಗೆ ಮೈಸೂರಿನ ಉದಯಗಿರಿ, ಮಂಡಿ ಮೊಹಲ್ಲಾ ಸೇರಿದಂತೆ ಮೈಸೂರು ಸುತ್ತಮುತ್ತ ಪ್ರದೇಶಗಳಲ್ಲಿರುವ ಹಿಂದೂಪರ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
2016 ರಿಂದ ತಲೆಮರೆಸಿಕೊಂಡಿದ್ದ ಈತ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ವಾಸ ಮಾಡಿಕೊಂಡಿದ್ದ. ಈತನ ವಿರುದ್ದ ಮೈಸೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಕೆಲ ಪ್ರಕರಣಗಳು ಸಿಐಡಿ ಹಾಗೂ ಮೈಸೂರಿನ ಸಿಸಿಬಿಗೆ ವರ್ಗವಾಗಿದ್ದವು.
ಆರೋಪಿ ಬೆಂಗಳೂರಿನ ಹೊರವಲಯದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.