ಬೆಂಗಳೂರು: ಈ ಬಾರಿಯ ಮಹಾಮಳೆಗೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಅದರ ಜತೆಗೆ ಲಕ್ಷಾಂತರ ಹೆಕ್ಟೇರ್ ಮುಂಗಾರು ಹಂಗಾಮಿನ ಕೃಷಿ ಬೆಳೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ.
ರಾಜ್ಯದಲ್ಲಿ ಸಂಭವಿಸಿದ ವರುಣಾಘಾತಕ್ಕೆ ಉತ್ತರ ಕರ್ನಾಟಕ ಹಾಗೂ ಮಲೆನಾಡು, ಕರಾವಳಿ ಕರ್ನಾಟಕದ ಜನರು ನಲುಗಿ ಹೋಗಿದ್ದಾರೆ. ಅದರ ಜತೆಗೆ ರಾಜ್ಯದ ರೈತರು ಬೆಳೆ ನಾಶದಿಂದ ಕುಗ್ಗಿ ಹೋಗಿದ್ದಾರೆ. ತಾವು ಬೆವರು ಸುರಿಸಿ ಬೆಳೆಸಿದ್ದ ಫಸಲು ಪ್ರವಾಹದ ಅಬ್ಬರಕ್ಕೆ ಕ್ಷಣಾರ್ಧದಲ್ಲಿ ತಮ್ಮ ಕಣ್ಣ ಮುಂದೆನೇ ಕೊಚ್ಚಿ ಹೋಗಿವೆ. ಇದರಿಂದ ಅನ್ನದಾತ ಅಕ್ಷರಶ: ಕಂಗೆಟ್ಟು ಹೋಗಿದ್ದಾನೆ. ಒಂದೆಡೆ ಬರಗಾಲದಿಂದ ಬೆಳೆ ನಷ್ಟ ಅನುಭವಿಸುತ್ತಿದ್ದ ರೈತ ಈ ಬಾರಿ ಮಳೆಯ ರುದ್ರ ನರ್ತನಕ್ಕೆ ಬೆಳೆದು ನಿಂತ ಫಸಲು ಪ್ರವಾಹಕ್ಕೆ ಆಹುತಿಯಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ಈವರೆಗೆ ರಾಜ್ಯದಲ್ಲಿ ಪ್ರವಾಹದಿಂದ ಒಟ್ಟು 5,99,787 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಹಾಗೇ ಇದ್ದು, ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಆತಂಕ ರೈತರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿದೆ. ಸುಮಾರು 6,500 ಕೋಟಿಗೂ ಅಧಿಕ ಮೌಲ್ಯದ ಬೆಳೆ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಪ್ರವಾಹ ಸಂಪೂರ್ಣ ತಗ್ಗಿದ ಬಳಿಕ ಬೆಳೆ ನಷ್ಟ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ನಷ್ಟದ ಮೌಲ್ಯ ಏರಿಕೆಯಾಗಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹಕ್ಕೆ ನಾಶವಾದ ಬೆಳೆಗಳ ವಿವರ:
- ಭತ್ತ- 93,571 ಹೆಕ್ಟೇರ್
- ಜೋಳ/ರಾಗಿ- 10490.6 ಹೆಕ್ಟೇರ್
- ಮುಸುಕಿನ ಜೋಳ- 1,32,601.77 ಹೆಕ್ಟೇರ್
- ಕಬ್ಬು- 1,21,385.73 ಹೆಕ್ಟೇರ್
- ಸೋಯಾ ಅವರೆ- 79,753 ಹೆಕ್ಟೇರ್
- ಶೇಂಗಾ- 29,962 ಹೆಕ್ಟೇರ್
- ಸೂರ್ಯಕಾಂತಿ- 4408.4 ಹೆಕ್ಟೇರ್
- ತೊಗರಿ- 16,266.4 ಹೆಕ್ಟೇರ್
- ಹೆಸರು- 35025 ಹೆಕ್ಟೇರ್
- ಉದ್ದು- 2747 ಹೆಕ್ಟೇರ್
- ಹತ್ತಿ- 66,611 ಹೆಕ್ಟೇರ್
ಯಾವ ಜಿಲ್ಲೆಯಲ್ಲಿ ಅಧಿಕ ಬೆಳೆ ನಾಶ?
- ಬೆಳಗಾವಿ- 2,34,652 ಹೆಕ್ಟೇರ್
- ಹಾವೇರಿ- 1,13,404 ಹೆಕ್ಟೇರ್
- ಧಾರವಾಡ- 1,00,281 ಹೆಕ್ಟೇರ್
- ಬಾಗಲಕೋಟೆ- 40,363 ಹೆಕ್ಟೇರ್