ಬೆಂಗಳೂರು: ಇಂದೋರ್ ನಗರಕ್ಕೆ ಪ್ರವಾಸ ಮಾಡಿ, ಕಸ ನಿರ್ವಹಣೆ ಬಗ್ಗೆ ಅಧ್ಯಯನ ಮಾಡಿಬಂದ ಮೇಯರ್ ನಗರದಲ್ಲಿರುವ ಕಸ ಘಟಕಕ್ಕೆ ಭೇಟಿ ನೀಡಿದರು.
ನಗರದ ಕೂಡ್ಲು ಗೇಟ್ ಬಳಿಯಿರುವ ಕೆಸಿಡಿಸಿ ಕಸ ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿದರು. 1975 ರಲ್ಲಿ ನಿರ್ಮಾಣವಾದ ಕೆಸಿಡಿಸಿ ಘಟಕಕ್ಕೆ ಈವರೆಗೆ 60 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅಲ್ಲದೇ ತಿಂಗಳಿಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇಷ್ಟಾದರೂ 500 ಮೆಟ್ರಿಕ್ ಟನ್ ಕಸ ಸಂಸ್ಕರಣೆ ಸಾಮರ್ಥ್ಯವಿರುವ ಘಟಕದಲ್ಲಿ, 80 ರಿಂದ 100 ಮೆಟ್ರಿಕ್ ಟನ್ ಮಾತ್ರ ಕಸ ಸಂಸ್ಕರಿಸಿ ಗೊಬ್ಬರ ಮಾಡಲಾಗುತ್ತಿದೆ. ವರ್ಷಕ್ಕೆ 34 ಲಕ್ಷ ರೂಪಾಯಿ ಗೊಬ್ಬರ ಉತ್ಪತ್ತಿ ಮಾಡಲಾಗುತ್ತಿದೆ.
ಮೇಯರ್ ಕಸದ ಘಟಕದ ಯಂತ್ರೋಪಕರಣಗಳನ್ನು ನೋಡುತ್ತಿದ್ದಂತೇ, ಝೀರೋ ಮೈಂಟೇನೆನ್ಸ್ ಎಂದು ಅಸಮಾಧಾನ ಹೊರಹಾಕಿದರು. ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಯಂತ್ರಗಳು, ತುಕ್ಕು ಹಿಡಿದಿದ್ದವು. ಇನ್ನು ಎಷ್ಟೋ ಯಂತ್ರಗಳು ಬಳಕೆಯೇ ಆಗದೇ ಜೇಡರ ಬಲೆಯಿಂದ ತುಂಬಿ ಹೋಗಿದ್ದವು. ಇಡೀ ಘಟಕದಲ್ಲಿ ಶೇಕಡಾ 50 ರಷ್ಟು ಯಂತ್ರೋಪಕರಣಗಳು ಬಳಕೆಯಾಗದ ಸ್ಥಿತಿಯಲ್ಲಿದೆ. ಎಲ್ಲ ಯಂತ್ರಗಳನ್ನು ಬದಲಿಸುವಂತೆ ಹಾಗೂ ಉನ್ನತೀಕರಣಗೊಳಿಸುವಂತೆ ಮೇಯರ್ ಅಧಿಕಾರಿಗಳಿಗೆ ತಿಳಿಸಿದರು. ಇನ್ನು ಬಯೋಮಿಥನೈಸೇಷನ್ ಘಟಕ ಕೂಡಾ ಸ್ಥಗಿತಗೊಂಡಿದ್ದು, ತಕ್ಷಣ ಮರುಚಾಲನೆಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ತಾಕೀತು ಮಾಡಿದರು.
ತ್ಯಾಜ್ಯ ನಿರ್ವಹಣೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲು ಕೇಂದ್ರ ಸರ್ಕಾರದ ಸ್ವಚ್ಛ ಭಾರತ ತಂಡದ ಪ್ರತಿನಿಧಿಗಳ ಬರಲಿದ್ದಾರೆ ಎಂದು ಮೇಯರ್ ತಿಳಿಸಿದರು. ಇದೇ ತಿಂಗಳ 27 ಕ್ಕೆ ನಗರಕ್ಕೆ ಭೇಟಿ ನೀಡಲಿದ್ದು, ಪಾಲಿಕೆ ಅಧಿಕಾರಿಗಳ ಜೊತೆ ಸೇರಿ ಕೆಲಸ ಮಾಡಲಿದ್ದಾರೆ ಎಂದರು.