ಬೆಂಗಳೂರು: ಬಿಬಿಎಂಪಿ ವಾರ್ಡ್ ನಂ.7ರ ವ್ಯಾಪ್ತಿಯ ಕೆಂಪಾಪುರದಲ್ಲಿ ಪಿಜಿ ಕಟ್ಟಡ ವಾಲಿದ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬ್ಯಾಟರಾಯನಪುರ ವಾರ್ಡ್ ನಂ.7ರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರೊಂದಿಗೆ ಭೇಟಿ ನೀಡಿದ ಮೇಯರ್ ಗೌತಮ್ಕುಮಾರ್ ಸುತ್ತಮುತ್ತಲ ನಿವಾಸಿಗಳ ಯೋಗಕ್ಷೇಮ ವಿಚಾರಿಸಿ, ಸಮಸ್ಯೆ ಆಲಿಸಿದರು.
ನಂತರ ಮಾತನಾಡಿದ ಮೇಯರ್, ಇಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡು ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲ ಮನೆಯ ನಿವಾಸಿಗಳನ್ನು ತೆರವುಗೊಳಿಸಿ ಕಲ್ಯಾಣ ಮಂಟಪ ಹಾಗೂ ಶಾಲೆಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು, ಪಿಜಿ ಪಕ್ಕದ ನಿವೇಶನದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಪಾಯ ತೋಡಿರುವುದರಿಂದ ಈ ಘಟನೆ ಸಂಭವಿಸಿದೆ. ಇದಕ್ಕೆ ಕಾರಣರಾದವರ ವಿರುದ್ದ ಕೇಸು ದಾಖಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ನಂತರ ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಕಟ್ಟಡವನ್ನು ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಮೇಲು ನೋಟಕ್ಕೆ ಕಾಣಿಸುತ್ತದೆ. ಇನ್ನು ಪಕ್ಕದಲ್ಲಿ ಕೈಗೊಂಡಿರುವ ಕಾಮಗಾರಿಗೆ ಅನುಮತಿ ಪಡೆದುಕೊಂಡಿಲ್ಲ. ಅಧಿಕಾರಿಗಳ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಸಂಭವಿಸುತ್ತವೆ. ಎಂದ ಅವರು ತಪ್ಪಿತಸ್ಥರ ವಿರುದ್ದ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.