ಬೆಂಗಳೂರು : ನೀರಾವರಿ ಯೋಜನೆಗಳಿಗೆ ರೈತರಿಂದ ಭೂಸ್ವಾಧೀನ ಮಾಡಿಕೊಂಡ ಜಮೀನುಗಳಿಗೆ ಸರ್ಕಾರ ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಿಧಾನಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮೇಗೌಡ ಅವರು ಮಾತನಾಡಿ, ಕೃಷ್ಣ ಮೇಲ್ದಂಡೆ ಯೋಜನೆಗೆ ರೈತರಿಂದ ಭೂ ಸ್ವಾಧೀನ ಮಾಡಿಕೊಂಡು ಅನೇಕ ವರ್ಷಗಳಾಗಿವೆ. ಆದರೆ, ಸರ್ಕಾರ ಈವರೆಗೂ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಲಿಲ್ಲ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್‌ನ ಸದಸ್ಯ ಶಿವಲಿಂಗೇಗೌಡ, ಸಿ ಎಸ್ ಪುಟ್ಟರಾಜು, ಹೆಚ್ ಕೆ ಕುಮಾರಸ್ವಾಮಿ ಸೇರಿ ಹಲವು ಸದಸ್ಯರು ಎತ್ತಿನಹೊಳೆ ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬಿದ್ದರು. ಸರ್ಕಾರ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಭೂಸ್ವಾಧೀನ ಮಾಡಿಕೊಳ್ಳುತ್ತದೆ.
ಜಮೀನು ಸೇರಿದಂತೆ ಎಲ್ಲವನ್ನು ಕಳೆದುಕೊಂಡಿರುವವರು ಪರಿಹಾರವೂ ಸಿಗದೆ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಹಣ ಕೊಡಿಸದಿದ್ದರೆ ನೇಣು ಹಾಕಿ ಎಂದು ಹೇಳಿದ್ದೇವೆ. ಈಗ ಜನ ನಮ್ಮನ್ನು ನೇಣು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಯಾಕೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.
ಓದಿ: ಭಾರತ್ ಬಂದ್: ರಸ್ತೆಯಲ್ಲೇ ಪಲಾವ್ ಸೇವಿಸಿ ರೈತರ ಪ್ರತಿಭಟನೆ
ಇದಕ್ಕೆ ಕೆರಳಿದ ಜೆ ಸಿ ಮಾಧುಸ್ವಾಮಿ, ಹೇಮಾವತಿ ಯೋಜನೆಗೆ ಭೂಸ್ವಾಧೀನವಾಗಿ 25 ವರ್ಷವಾದ್ರೂ ಪರಿಹಾರ ನೀಡಿರಲಿಲ್ಲ. ಈಗಿರುವ ಕಾಳಜಿ ಅಂದು ಏಕೆ ಇರಲಿಲ್ಲ ಎಂದು ತಿರುಗೇಟು ನೀಡಿದರು. ಸರ್ಕಾರ ಯಾವುದೇ ಇರಲಿ ಪರಿಹಾರ ನೀಡುವುದಕ್ಕೆ ವಿಳಂಬವಾಗಬಾರದು. ರೈತರಿಗೆ ಪರಿಹಾರ ಸಿಗಬೇಕೆಂಬುದು ನಮ್ಮ ಕಳಕಳಿ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಆನಂದ್ ನ್ಯಾಮೇಗೌಡ, ಕೃಷ್ಣ ಮೇಲ್ದಂಡೆ 2ನೇ ಹಂತದ ಯೋಜನೆಗೆ 55 ಸಾವಿರ ಕೋಟಿಯಿಂದ 80 ಸಾವಿರ ಕೋಟಿಗೆ ಏರಿಕೆಯಾಗಿದೆ. ನಮ್ಮ ಭಾಗದಲ್ಲಿ ಪದೇಪದೆ ಪ್ರವಾಹ ಉಂಟಾಗುತ್ತದೆ.
ಸರ್ಕಾರ ಇದಕ್ಕೆ ಏನಾದರೊಂದು ಪರಿಹಾರ ಕ್ರಮ ಕೈಗೊಳ್ಳಲಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಶೀಘ್ರದಲ್ಲೇ ಮುಖ್ಯಮಂತ್ರಿಗಳು ಹಾಗೂ ಆ ಭಾಗದ ಶಾಸಕರ ಜೊತೆ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು.