ಬೆಂಗಳೂರು: ಕಾರ್ಮಿಕರು ತಂಗಿರುವ ನಗರದ ವಿವಿಧ ಪ್ರದೇಶಗಳಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮೊದಲಿಗೆ ಕಾರ್ಮಿಕರು ವಾಸವಾಗಿರುವ ಶಿವಾನಂದ ಸರ್ಕಲ್ ಬಳಿಯ ಜೆಎಂಸಿ ಪ್ರಾಜೆಕ್ಟ್ನ ನಿರ್ಮಾಣ ಹಂತದ ಕಟ್ಟಡ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಕಾರ್ಮಿಕರ ಅಹವಾಲು ಆಲಿಸಿದರು. ಈ ವೇಳೆ ಕಾರ್ಮಿಕರು ಮಾಸ್ಕ್ ವಿತರಿಸದೇ ಇರೋದಕ್ಕೆ ಸಚಿವರು ಸಿಡಿಮಿಡಿಗೊಂಡರು.
ಕೋಟಿ ಕೋಟಿ ವೆಚ್ಚ ಮಾಡಿ ಕಟ್ಟಡ ಕಟ್ಟುತ್ತೀರಾ. ಮಿನಿಮಮ್ ಮಾಸ್ಕ್ ಕೊಟ್ಟಿಲ್ಲ ಅಂದ್ರೆ ಹೇಗೆ? ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧನೂ ಹೆಬ್ಬಾರ್ ಕಿಡಿಕಾರಿದರು. ಕಾರ್ಮಿಕರ ಹಿತ ಕಾಪಾಡಬೇಕು. ಕಾರ್ಮಿಕರಿಗೆ ಏನಾದ್ರು ಆದರೆ ನೀನು ಒಳಗೆ ಹೋಗ್ತಿಯಾ, ನಿನ್ನ ಕಂಪನಿನೂ ಒಳಗೆ ಹೋಗುತ್ತೆ ಎಂದು ಸೈಟ್ ಎಂಜಿನಿಯರ್ವೊಬ್ಬರಿಗೆ ಖಡಕ್ ಸೂಚನೆ ಕೊಟ್ಟರು.
ಮನೆಗೆ ಹೋಗುವ ಆಸೆ ಆಗ್ತಾ ಇದೆ:
ಭೇಟಿ ವೇಳೆ ಕಾರ್ಮಿಕ ಸಚಿವರ ಬಳಿ ಕೆಲ ಕಾರ್ಮಿಕರು ನಾವು ನಮ್ಮ ಮನೆಗೆ ಹೋಗಬೇಕೆಂಬ ಆಸೆಯಾಗುತ್ತಿದೆ ಎಂದು ಹೇಳಿಕೊಂಡರು. ನಾಲ್ಕೈದು ತಿಂಗಳು ಆಯ್ತು ಮನೆಗೆ ಹೋಗಿ. ಈಗ ಕೊರೊನಾ ಲಾಕ್ಡೌನ್ ಆಗಿದೆ. ಮನೆಗೆ ಹೋಗಬೇಕು ಅಂತ ಆಸೆ ಆಗುತ್ತಿದೆ ಸರ್ ಎಂದಿದ್ದಾರೆ.
ಈ ವೇಳೆ ಸಚಿವರು, ಸ್ವಲ್ಪ ದಿನ ಕಾಯಿರಿ ಎಂದು ಹೇಳಿ ಕಾರ್ಮಿಕರನ್ನು ಸಮಾಧಾನಪಡಿಸಿದರು. ಆದರೆ ಭೇಟಿ ವೇಳೆ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲರಾದರು. ಸಚಿವರ ಸುತ್ತ ಹತ್ತಾರು ಕಾರ್ಮಿಕರು ಗುಂಪು ಸೇರುತ್ತಿರುವುದು ಕಂಡು ಬಂತು.
ಏ. 30ಕ್ಕೆ ಎಲ್ಲಾ ಕಾರ್ಮಿಕರಿಗೆ ಹಣ:
ಈ ತಿಂಗಳ 30ಕ್ಕೆ ಎಲ್ಲಾ ಕಾರ್ಮಿಕರಿಗೂ ವೇತನ ಪಾವತಿ ಮಾಡಲಾಗುತ್ತದೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು. ಕೆಲ ಕಡೆ ಸಣ್ಣಪುಟ್ಟ ಲೋಪದೋಷಗಳಾಗಿವೆ. ಕಾರ್ಮಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸ್ವಲ್ಪ ಅಡೆತಡೆಗಳಿವೆ. ಏನೇ ಪ್ರಯತ್ನ ಮಾಡಿದ್ರೂ ಇಂತಹ ಸ್ಥಳಗಳಲ್ಲಿ ಈ ನಿಯಮಗಳನ್ನು ಕಾಪಾಡಲು ಕಷ್ಟವಿದೆ. ಆದರೆ ಬಡಜನರಿಗೆ ದೇವರ ರಕ್ಷಣೆ ಯಾವಾಗಲೂ ಇದ್ದೇ ಇರುತ್ತದೆ ಎಂದರು.