ಬೆಂಗಳೂರು : ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮಗೂ ಈ ಚಿತ್ರ ಅರ್ಥ ಆಗಬೇಕು.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಡಬ್ಬಿಂಗ್ ಆಗಬೇಕು. ಈಗ ಹಿಂದಿಯಲ್ಲಿ ಬಿಡುಗಡೆ ಆಗಿದೆ. ಕನ್ನಡಕ್ಕೂ ಡಬ್ ಮಾಡಬೇಕು. ಕನ್ನಡದಲ್ಲಿ ಬಂದ್ರೆ ಹಿಂದಿ ಬಾರದವರಿಗೂ ಅರ್ಥ ಆಗುತ್ತೆ. ಕನ್ನಡದಲ್ಲಿ ಬಂದ್ರೆ ಒಳ್ಳೆಯದು ಎಂದರು.
ಈ ಹಿಂದೆಯೇ 370 ಕಾಯ್ದೆ ತೆಗೆದು ಹಾಕಬೇಕಿತ್ತು. ಕಾಂಗ್ರೆಸ್ ಯಾಕೆ ತೆಗೆದು ಹಾಕಿಲ್ಲ? ಈ 370 ಕಾಯ್ದೆ ತೆಗೆದು ಹಾಕೋಕೆ ಪ್ರಧಾನಿ ಮೋದಿ ಬರಬೇಕಾಯ್ತು. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿಗೆ 'ವೈ' ಶ್ರೇಣಿಯ ಭದ್ರತೆ
ಬೆಳಗಾವಿಯಲ್ಲಿ ನಡೆದ ಎಂಇಎಸ್ ಪುಂಡಾಟಿಕೆ ಬಗ್ಗೆ ಸರ್ಕಾರ ಲಘುವಾಗಿ ಪರಿಗಣಿಸಿಲ್ಲ. ಅವರ ಪುಂಡಾಟಿಕೆಯಿಂದ ಶಾಂತಿ, ಸುವ್ಯವಸ್ಥೆಗೆ ಭಂಗ ಆಗಿದೆ. ಯಾರು ಇಂತಹ ಕೃತ್ಯಗಳನ್ನು ಮಾಡಿದ್ದಾರೋ ಅವರ ಮೇಲೆ ನಾವು ಕ್ರಮ ತೆಗೆದುಕೊಳ್ತೇವೆ. ಅವರೂ ಕೂಡ ಬಹಳ ದಿನ ಬಂಧನದಲ್ಲಿ ಇದ್ದರು.
ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಂಡಿದ್ದು ನಿಜ. ಆದರೆ, ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸಿ ನಿರ್ಧಾರ ಮಾಡ್ತೀವಿ. ನೆಲ,ಜಲ, ಭಾಷೆ ಬಗ್ಗೆ ನಾವು ಲಘುವಾಗಿ ತೆಗೆದುಕೊಳ್ಳಲ್ಲ. ಏನು ಕ್ರಮ ತೆಗೆದುಕೊಳ್ಳಬೇಕೋ ಆ ಕ್ರಮ ತೆಗೆದುಕೊಳ್ತೇವೆ ಎಂದರು.