ಬೆಂಗಳೂರು: ಕೊಡವರಿಗೆ ಪ್ರತ್ಯೇಕ ಸ್ಥಾನಮಾನಕ್ಕಾಗಿ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಲ್ಲಿಸಿರುವ ಮನವಿ ಪರಿಗಣಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ನಾಲ್ಕು ವಾರಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯರೂ ಆದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠದ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾಯಾಲಯ ಕಳೆದ ಬಾರಿ ನೀಡಿದ್ದ ನಿರ್ದೇಶನದಂತೆ ಅರ್ಜಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅನ್ನು ಪಕ್ಷಗಾರರನ್ನಾಗಿ ಮಾಡಲಾಗಿದೆ. ಆ ಕುರಿತು ಅರ್ಜಿಯಲ್ಲಿ ತಿದ್ದುಪಡಿ ಮಾಡಿ ಅದರ ಪ್ರತಿಯನ್ನು ಪ್ರತಿವಾದಿಗಳಿಗೆ ತಲುಪಿಸಲಾಗಿದೆ ಎಂದು ವಿವರಿಸಿದರು.
ಈ ವೇಳೆ ಸಿಎನ್‌ಸಿ ಪರ ವಕೀಲರು, ತಾವು ಅರ್ಜಿದಾರರ ವಾದವನ್ನು ಬೆಂಬಲಸಲಿದ್ದೇವೆ. ಆ ಕುರಿತು ಪ್ರಮಾಣಪತ್ರ ಸಲ್ಲಿಸಲಾಗುವುದು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಆ.3ಕ್ಕೆ ಮುಂದೂಡಿತು. ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಡಾ.ಸುಬ್ರಮಣಿಯನ್ ಸ್ವಾಮಿ ಖುದ್ದು ಹಾಜರಾಗಿ, ಅರ್ಜಿಯಲ್ಲಿನ ಮನವಿ ಕುರಿತು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಅವರ ವಾದ ಪರಿಗಣಿಸಿದ ನ್ಯಾಯಪೀಠ, ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿ, ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಅರ್ಜಿಯಲ್ಲಿ ನಾಲ್ಕನೇ ಪ್ರತಿವಾದಿಯಾಗಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅವರ ಮನವಿಯನ್ನು ಅರ್ಜಿದಾರರು ಈ ಅರ್ಜಿಯಲ್ಲಿ ಎತ್ತಿದ್ದಾರೆ. ಹಾಗಾಗಿ, ಕೊಡವ ನ್ಯಾಷನಲ್ ಕೌನ್ಸಿಲ್ ಅನ್ನೇ ಅರ್ಜಿದಾರರು ಪ್ರತಿನಿಧಿಸಬೇಕು. ಈ ಕುರಿತು ಅರ್ಜಿ ತಿದ್ದುಪಡಿ ಮಾಡಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂ.14ಕ್ಕೆ ಮುಂದೂಡಿತ್ತು.
ಕೊಡವ ಸಮುದಾಯದವರು ವಿಭಿನ್ನ ಭೌಗೋಳಿಕ ಹಾಗೂ ಸಂಸ್ಕೃತಿ ಹಿನ್ನೆಲೆ ಹೊಂದಿದ್ದಾರೆ. ಇದರಿಂದ ಸಂವಿಧಾನದ ಪರಿಚ್ಛೇದ 242 ಅಡಿ ಸ್ಟೇಟ್ ಆಫ್ ಕೂರ್ಗ್ ಎಂದು ಗುರುತಿಸಲಾಗಿದೆ. ಅದರಂತೆ ಸ್ಟೇಟ್ ಆಫ್ ಕೂರ್ಗ್‌ಗೆ ಲೋಕಸಭೆ ಮತ್ತು ರಾಜ್ಯಸಭೆಗೆ ತಲಾ ಓರ್ವ ಸದಸ್ಯರನ್ನು ಕಳುಹಿಸಲು ಅವಕಾಶವಿದೆ.
ಸಿ ಸ್ಟೇಟ್ಸ್ ಕಾಯ್ದೆ- 1952ರ ಪ್ರಕಾರ ಕೂರ್ಗನ್ನು ಭಾರತೀಯ ಒಕ್ಕೂಟದ ಸಿ ಸ್ಟೇಟ್ ಭಾಗವಾಗಿದೆ. ಕೂರ್ಗ್ ಸ್ವಯಂ ಅವಲಂಬಿತ ಸ್ಟೇಟ್ ಆಗಿದ್ದು, 1956ರಲ್ಲಿ ಮೈಸೂರು ರಾಜ್ಯದೊಂದಿಗೆ ವಿಲೀನ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ, ಸಂವಿಧಾನದ ಆರನೇ ಶೆಡ್ಯೂಲ್‌ನಲ್ಲಿ ಸ್ಥಳೀಯ ಮತ್ತು ಬುಡಕಟ್ಟು ಸಮೂಹದ ಹಕ್ಕುಗಳನ್ನು ಸಂರಕ್ಷಿಸಲು ಅಟಾನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್ (ಎಡಿಸಿ) ಸಹ ಸ್ಥಾಪಿಸಲಾಗಿದೆ. ಭಾರತದ ಈಶಾನ್ಯ ಭಾಗದ ಪ್ರದೇಶಗಳಾದ ಅಸ್ಸಾಂ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಿಗೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ ನೀಡಲಾಗಿದೆ.
ಅದೇ ರೀತಿ ಕೊಡವ ಸಮುದಾಯದವರು ವಿಭಿನ್ನ ಭೌಗೋಳಿಕ, ಇತಿಹಾಸ ಮತ್ತು ಸಂಸ್ಕೃತಿ ಹಿನ್ನಲೆ ಹೊಂದಿದ್ದಾರೆ. ಅವರ ಹಕ್ಕುಗಳನ್ನು ಮಾಡುವ ನಿಟ್ಟಿನಲ್ಲಿ ‘ಕೊಡವ ಸಮುದಾಯಕ್ಕೆ ಭೌಗೋಳಿಕ ರಾಜಕೀಯ ಸ್ವಾಯತ್ತತೆ’ ನೀಡಲು ಕೋರಿ ಸಿಎನ್‌ಸಿ ಮನವಿ ಸಲ್ಲಿಸಿದೆ. ಆ ಬಗ್ಗೆ ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಆಯೋಗವೊಂದನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಜಿಎಸ್‌ಟಿ ಕೌನ್ಸಿಲ್ ಸದಸ್ಯರಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ನೇಮಕ