ಬೆಂಗಳೂರು: ಚಿತ್ರದುರ್ಗದ ಮುರುಘಾರಾಜೇಂದ್ರ ಬೃಹನ್ಮಠಕ್ಕೆ ತಾತ್ಕಾಲಿಕ ಉಸ್ತುವಾರಿಯನ್ನು ನೇಮಕ ಮಾಡಿರುವ ಪ್ರಕ್ರಿಯೆ ಸಂಬಂಧ ಕೂಲಂಕಷವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಈ ಹಿಂದೆ ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ವಿಸ್ತರಣೆ ಮಾಡಿದೆ.
ಮಠ ಮತ್ತು ಮಠದ ಅಧೀನದ ಶಿಕ್ಷಣ ಸಂಸ್ಥೆಗಳನ್ನು ಮೇಲ್ವಿಚಾರಣೆಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಚ್. ಏಕಾಂತಯ್ಯ ಸೇರಿ ಮತ್ತಿತರರು ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ವಿಚಾರಣೆ ವೇಳೆ, ಮಠದ ಪರವಾಗಿ ವಾದ ಮಂಡಿಸಿ ವಕೀಲರು, ಮಠದ ನಿತ್ಯದ ಚಟುವಟಿಕೆಗಳನ್ನು ನೋಡಿಕೊಳ್ಳುವುದಕ್ಕಾಗಿ ಶಾಖಾ ಮಠದ ಸ್ವಾಮೀಜಿ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಜೊತೆಗೆ, 20 ಸದಸ್ಯರ ಸಮಿತಿ ಇದೆ. ಹೀಗಿರುವಾಗ ಮತ್ತೊಬ್ಬರನ್ನು ಆಡಳಿತಾಧಿಕಾರಿ ನೇಮಕ ಅಗತ್ಯವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಉತ್ತರಾಧಿಕಾರಿ ನೇಮಕ ಸಂದರ್ಭದಲ್ಲಿ ಯಾವ ನಿಯಮಗಳನ್ನು ಅನುಸರಿಸಲಾಗಿದೆ. ಕಳೆದ 300 ವರ್ಷಗಳಿಂದ ನಡೆದು ಬಂದಿರುವ ಪದ್ದತಿಯನ್ನೇ ಅನುಸರಿಸಲಾಗಿದಿಯೇ? ಯಾವ ನಿಯಮಗಳನ್ನು ಪಾಲನೆ ಮಾಡಲಾಗಿದೆ ಎಂಬ ವಿವರಗಳನ್ನು ತಿಳಿದುಕೊಳ್ಳಬೇಕಾಗಿದೆ. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಅಂದಿನ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ವಸ್ತ್ರದ 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು.
ರಾಜ್ಯ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು, ಹೈಕೋರ್ಟ್ ಮೆಟ್ಟಿಲೇರಿದ್ದರು. ಸಂವಿಧಾನದ 162ನೇ ವಿಧಿಯ ಅನುಸಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸಂವಿಧಾನ ಬಾಹಿರ. ಅಂತೆಯೇ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ 1988ರ ಕಲಂ 8(2)ಅಡಿ ಶರಣರು ತಮ್ಮ ಅಧಿಕಾರ ಚಲಾಯಿಸಲು ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಕಾನೂನು ಬಾಹಿರ.
ಆದ್ದರಿಂದ, ಈ ಆದೇಶಗಳನ್ನು ವಜಾಗೊಳಿಸಬೇಕು ಎಂದು ಪ್ರತ್ಯೇಕವಾಗಿ ಕೋರಿದ್ದರು. ಈ ಎರಡೂ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದ ಕ್ರಮವನ್ನು ರದ್ದುಪಡಿಸಿತ್ತು. ಅಂತೆಯೇ, ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶವನ್ನೂ ವಜಾಗೊಳಿಸಿ, ’ಮಠ ಮಾನ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಕಾಯ್ದೆ 1997ಕ್ಕೆ ರಾಜ್ಯ ಸರ್ಕಾರ 2011ರಲ್ಲೇ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಅನುಸಾರ ಯಾವುದೇ ಮಠ, ಮಠಕ್ಕೆ ಹೊಂದಿಕೊಂಡ ದೇಗುಲಗಳನ್ನು ಶಾಸನದಿಂದ ಹೊರಗಿಡಲಾಗಿದೆ. ಈ ಕುರಿತ ತಿದ್ದುಪಡಿಯನ್ನು ಸುಪ್ರೀಂ ಕೋರ್ಟಿಗೂ ಸಲ್ಲಿಸಲಾಗಿದೆ‘ ಎಂಬ ಅಂಶವನ್ನು ತೀರ್ಪಿನಲ್ಲಿ ಕಾಣಿಸಿದ್ದ ನ್ಯಾಯಪೀಠ, ’ಸರ್ಕಾರವು ಮಠದ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಬರುವುದಿಲ್ಲ. ಶಾಸನಯುಕ್ತ ಅಧಿಕಾರ ಇದ್ದರೆ ಮಾತ್ರವೇ ಮಧ್ಯಪ್ರವೇಶ ಮಾಡಬಹುದು ಎಂದು ಹೇಳಲಾಗಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿರಲಿಲ್ಲ. ಆದರೆ, ಏಕಾಂತಯ್ಯ ಅವರು ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ : ಡಿಕೆಶಿ ವಿರುದ್ದದ ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ಮತ್ತೆ ವಿಸ್ತರಣೆ