ಬೆಂಗಳೂರು: ಕೊರೊನಾ ಪ್ರಾರಂಭದಿಂದ ಜನರು ಹೆಚ್ಚು ವಿಮೆ ಖರೀದಿ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪ್ರತಿನಿತ್ಯ 50 ರಿಂದ 60 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಜನಸಾಮಾನ್ಯರಿಗೆ ಇದು ದೊಡ್ಡ ಸಮಸ್ಯೆ ಆಗುತ್ತಿದೆ ಎಂದು ಸಮುದಾಯ ಔಷಧಿ ಹಾಗೂ ಸಾರ್ವಜನಿಕ ಆರೋಗ್ಯ ವೈದ್ಯೆ ಡಾ.ಸಿಲ್ವಿಯಾ ಜಾಕ್ ಹೇಳಿದರು.
ಸರ್ಕಾರ ನಿಗದಿಪಡಿಸಿದ ಕೊರೊನಾ ಚಿಕಿತ್ಸೆ ದರದಲ್ಲಿ ಯಾವುದೇ ತರ್ಕವಿಲ್ಲ. ಖಾಸಗಿ ಆಸ್ಪತ್ರೆಗಳು ಇಚ್ಛೆ ಬಂದಂತೆ ದರ ನಿಗದಿ ಪಡಿಸುತ್ತಿದ್ದಾರೆ. ವಿಮೆಯ ಹಣ ಮುಗಿದ ನಂತರ ಸೋಂಕಿತರು ತಮ್ಮ ಸ್ವಂತ ಹಣದಿಂದ ಚಿಕಿತ್ಸೆಗೆ ಹಣ ಭರಿಸಬೇಕಾಗುತ್ತದೆ. ಕೆಲವು ಔಷಧಿಗಳು ಹೊಸ ರೀತಿಯ ಚಿಕಿತ್ಸೆಗಳು ಹಾಗೂ ಇನ್ನಿತರೆ ಅಂಶಗಳು ವಿಮೆಯಲ್ಲಿ ಸೇರುತ್ತಿಲ್ಲ ಎಂದು ಹೇಳಿದರು.
ಇದಿಷ್ಟೇ ಅಲ್ಲದೆ ವಿಮೆ ಪಡೆಯಬೇಕಾದ ಸಂದರ್ಭದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಇನ್ನಿತರ ಕಾಯಿಲೆಗಳು ಇದ್ದರೆ ವಿಮೆ ಪಡೆಯಲು ಸಾಧ್ಯವಿಲ್ಲ. ಶೇ.85ರಿಂದ 90 ಜನರು ಯಾವುದೇ ಸಮಸ್ಯೆ ಇಲ್ಲದೆ ಈ ಸೋಂಕಿನಿಂದ ಹೊರಬರುತ್ತಾರೆ, ಇನ್ನುಳಿದ ಶೇ.5 ಸೋಂಕಿತರಿಗೆ ಮಾತ್ರ ತೀವ್ರ ನಿಗಾ ಘಟಕ ಬೇಕಾಗುವ ಪರಿಸ್ಥಿತಿ ಇರುತ್ತದೆ. ಹೀಗಾಗಿ ಸರ್ಕಾರ ಕೊರೊನಾ ವೈರಸ್ಗೆ ಪ್ರತ್ಯೇಕವಾಗಿ ವಿಮೆ ಮಾಡಿಸುವಂತೆ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡಿ ಬದಲಾವಣೆ ತರಬೇಕು ಎಂದು ಆಗ್ರಹಿಸಿದರು.
ಒಟ್ಟಾರೆಯಾಗಿ ಆರೋಗ್ಯ ವಿಮೆ ಪಡೆಯುವುದು ಜನರ ಸುರಕ್ಷತೆಗೆ ಆಗಿರಬೇಕೆ ಹೊರತು ಆಸ್ಪತ್ರೆಗಳ ಲಾಭಕ್ಕೆ ವಿಮೆ ಪ್ರಯೋಜನವಾಗಬಾರದು ಎಂದು ಡಾ.ಸಿಲ್ವಿಯಾ ಜಾಕ್ ಅಭಿಪ್ರಾಯಪಟ್ಟಿದ್ದಾರೆ.