ಬೆಂಗಳೂರು : ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಅವಧಿ ಮತ್ತು ಅದರ ರೂಪುರೇಷೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕರಿಸಿದ್ದಪ್ಪ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಶುಕ್ರವಾರ ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಈ ಕಾರ್ಯಪಡೆಯ ಮೊದಲ ಸಭೆ ನಡೆಸಿ, ಆ ಕುರಿತು ಚರ್ಚಿಸಲಾಯಿತು.
ಎಂಜಿನಿಯರಿಂಗ್ ಇಂಟರ್ನ್‌ಶಿಪ್ ಅವಧಿ ಈಗ 4 ವಾರ ಇದ್ದು, ಅದು ತುಂಬಾ ಕಡಿಮೆ ಅವಧಿ. ಆ ಅವಧಿಯನ್ನು 3 ರಿಂದ 6 ತಿಂಗಳಿಗೆ ವಿಸ್ತರಿಸುವ ಪ್ರಸ್ತಾವನೆ ಬಂದಿದೆ. ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಹೆಚ್ಚೆಚ್ಚು ಆಗಬೇಕು ಎಂಬ ಕಾರಣಕ್ಕೆ ಇಂಟರ್ನ್‌ಶಿಪ್ ಅನ್ನೇ ಒಂದು ಸೆಮಿಸ್ಟರ್ ಮಾಡುವ ಯೋಚನೆಯೂ ನನ್ನಲ್ಲಿ ಬಂತು. ಆದಾಗ್ಯೂ ಈ ಬಗ್ಗೆ ತಜ್ಞರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಈ ಹಿನ್ನೆಲೆ ಕಾರ್ಯಪಡೆ ರಚಿಸಲಾಗಿದೆ ಎಂದು ತಿಳಿಸಿದರು.
ವ್ಯಾಸಂಗ ಮಾಡುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಬರಬೇಕು. ಆಗ ಮಾತ್ರ ಅವರ ಭವಿಷ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಸ್ಕಾಂ ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಪ್ರತಿನಿಧಿಗಳು ಕೂಡ ಇದನ್ನೇ ಸಲಹೆ ನೀಡಿದ್ದಾರೆ ಎಂದರು. ಪ್ರಸ್ತುತ, ಉದ್ಯೋಗ ಮಾರುಕಟ್ಟೆ ಬಹಳ ಸ್ಪರ್ಧಾತ್ಮಕವಾಗಿದೆ. ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕಾದರೆ, ಕಾಲೇಜುಗಳಿಂದ ಹೊರಬರುವಾಗಲೇ ವಿದ್ಯಾರ್ಥಿಗಳು ಸಂಪೂರ್ಣ ನೈಪುಣ್ಯತೆ ಸಾಧಿಸಿ ಬರಬೇಕು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: CEPMIZ ಕ್ರಿಯಾ ಯೋಜನೆ ಸಂಬಂಧ ಸಂಪುಟ ಉಪಸಮಿತಿ ರಚನೆ
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕರಿಸಿದ್ದಪ್ಪ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ, ಕಾಲೇಜು ಶಿಕ್ಷಣ ಆಯುಕ್ತ ಪಿ.ಪ್ರದೀಪ್, ಐಟಿ ನಿರ್ದೇಶಕಿ ಮೀನಾ ನಾಗರಾಜ, ಸಿಐಐ ಮತ್ತು ನ್ಯಾಸ್ಕಾಮ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.