ಬೆಂಗಳೂರು: ರಾಜಧಾನಿಯ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವಂತೆ ಹಾಗೆಯೇ ಸಿವಿಲ್ ಮ್ಯಾಟರ್ಗಳಲ್ಲಿ ಪೊಲೀಸರು ಭಾಗಿಯಾಗದಂತೆ ಗೃಹಸಚಿವರು ಎಚ್ಚರಿಕೆ ನೀಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ಕ್ರೈಂ ಅನ್ನು ತಡೆಗಟ್ಟುವುದು ಹೇಗೆ ಎನ್ನುವುದರ ಕುರಿತು ಗೃಹಸಚಿವ ಬಸವಾರಾಜ್ ಬೊಮ್ಮಯಿ ಇಂದು ಎಲ್ಲ ಹಿರಿಯ ಪೊಲೀಸರಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ, ಸಿಸಿಬಿ ಹೆಚ್ಚುವರಿ ಆಯುಕ್ತ, ಟ್ರಾಫಿಕ್ ಆಯುಕ್ತ ಹಾಗೂ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಭಾಸ್ಕರ್ ರಾವ್, ಇತ್ತೀಚೆಗೆ ಸಿಟಿ ಹೊರಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿದ್ದು, ದಂಧೆಗೆ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದರು. ಅಲ್ಲದೇ, ಬೆಂಗಳೂರಿನಲ್ಲಿ ಹೊಸ ಎಟಿಸಿ (ಆಂಟಿ ಟೆರಟಿಸ್ಟ್ ಸೆಲ್) ಹಾಗೆ ಹೊಸ 8 ಸೈಬರ್ ಮತ್ತು ನಾರ್ಕೊಟಿಲ್ ಸ್ಟೇಷನ್ ರಚನೆಗೂ ಹೋಂ ಮಿನಿಸ್ಟರ್ ಒಪ್ಪಿಗೆ ಸೂಚಿಸಿದ್ದು, ಅದನ್ನ ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದರು.