ಬೆಂಗಳೂರು: ದಿ ಲಿವರ್ ಡಾಕ್ಟರ್ ಎಂದೇ ಖ್ಯಾತಿಯಾಗಿದ್ದ ಅಮೆರಿಕ ಮೂಲದ ವೈದ್ಯ ಡಾ.ಸಿರಿಯಾಕ್ ಅಬ್ಬಿ ಪಿಲಿಫ್ಸ್ ಅವರ ಎಕ್ಸ್ ಖಾತೆ (ಹಿಂದಿನ ಟ್ವಿಟರ್) ನಿರ್ಬಂಧಿಸಿ ನಗರದ ಸಿವಿಲ್ ನ್ಯಾಯಾಲಯ ವಿಧಿಸಿದ್ದ ಆದೇಶವನ್ನು ಹೈಕೋರ್ಟ್ ಸಡಿಲಗೊಳಿಸಿದೆ.
ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ವೈದ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಹಿಮಾಲಯ ವೆಲ್ ನೆಸ್ ಕಾರ್ಪೋರೇಷನ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಮಾಡಿದ್ದ ಅವಹೇಳನಕಾರಿ ಟ್ವೀಟ್‌ಗಳನ್ನು ಹೈಡ್(ಮರೆ)ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿರುವ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಬಳಸಲು ಅವಕಾಶ ಮಾಡಿಕೊಡಲಾಗುವುದು ಎಂದು ಆದೇಶಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ: ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ಸಿವಿಲ್ ನ್ಯಾಯಾಲಯ ಸಂಪೂರ್ಣ ಖಾತೆಯನ್ನು ನಿರ್ಬಂಧಿಸುವ ಏಕಪಕ್ಷೀಯ ಆದೇಶ ಹೊರಡಿಸಿದೆ. ಇದರಿಂದ ವೈದ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವು ಮೊಟಕಾಗಿದೆ. ಹಾಗಾಗಿ ಆ ಆದೇಶವನ್ನು ಸಡಿಲಿಸಬೇಕು. ಬೇಕಿದ್ದರೆ ಅರ್ಜಿದಾರರು ಪ್ರತಿವಾದಿ ಕಂಪನಿಯ ವಿರುದ್ಧ ಪೋಸ್ಟ್ ಮಾಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಗಳನ್ನು ಹೈಡ್ ಮಾಡುತ್ತಾರೆ ಎಂದು ವಿವರಿಸಿದರು. ಈ ಅಂಶವನ್ನು ದಾಖಲಿಸಿಕೊಂಡು ಆದೇಶ ಸಡಿಲಿಸಿದ ಹೈಕೋರ್ಟ್ ಎಕ್ಸ್ ಕಾರ್ಪ್ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನ.2ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ಪಿಲಿಫ್ಸ್ ವಿರುದ್ಧ ಹಿಮಾಲಯ ವೆಲ್ನೆಸ್ ಕಂಪನಿ, ತಮ್ಮ ಉತ್ಪನ್ನಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಸಲ್ಲಿಸಿದ್ದ ದಾವೆ ಆಲಿಸಿದ ನಗರದ ಸಿಟಿ ಸಿವಿಲ್ ನ್ಯಾಯಾಲಯ ವೈದ್ಯರ ಸಂಪೂರ್ಣ ಖಾತೆ ನಿರ್ಬಂಧಿಸುವ ಮಧ್ಯಂತರ ಆದೇಶ ಹೊರಡಿಸಿತ್ತು. ಅಲ್ಲದೆ, ಪಿಲಿಫ್ಸ್ ಅವರು ಮುಂದಿನ ವಿಚಾರಣೆವರೆಗೆ ಹಿಮಾಲಯ ವೆಲ್ನೆಸ್ ಕಂಪನಿಯ ಉತ್ಪನ್ನಗಳ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುವಂತಿಲ್ಲ ಎಂದೂ ನ್ಯಾಯಾಲಯ ಆದೇಶಿಸಿತ್ತು.
ಹಿಮಾಲಯ ವೆಲ್ನೆಸ್ ಕಂಪನಿ ಪರ ವಕೀಲರು, ಡಾ.ಪಿಲಿಫ್ಸ್ ಬೇರೆ ಕಂಪನಿಯ ಉತ್ಪನ್ನಗಳನ್ನು ಉತ್ತೇಜಿಸುವ ದೃಷ್ಟಿಯಿಂದ ತಮ್ಮ ಕಕ್ಷಿದಾರರಿಗೆ ಸೇರಿದ ಕಂಪನಿಯ ಉತ್ಪನ್ನಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಂಪನಿಗೆ ಭಾರಿ ಪ್ರಮಾಣದ ಆರ್ಥಿಕ ನಷ್ಟವಾಗುತ್ತಿದೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.
ಅಲ್ಲದೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮದ್ರಾಸ್ ಮತ್ತು ದೆಹಲಿ ಹೈಕೋರ್ಟ್ಗಳು ಹಲವು ತೀರ್ಪುಗಳನ್ನು ನೀಡಿವೆ ಎಂದು ಉಲ್ಲೇಖಿಸಿದ ಅವರು, ಅರ್ಜಿದಾರ ಕಂಪನಿಗೆ ಆಗುತ್ತಿರುವ ನಷ್ಟ ತಡೆಯಬೇಕಾದರೆ ಕೂಡಲೇ ಪ್ರತಿವಾದಿಯ ಸಾಮಾಜಿಕ ಜಾಲತಾಣದ ಖಾತೆ ನಿರ್ಬಂಧಿಸಬೇಕು. ಇದರಿಂದ ಸಂಭಾವ್ಯ ಗ್ರಾಹಕರಿಗೆ ತಪ್ಪು ಮಾಹಿತಿ ರವಾನೆಯಾಗುವುದು ತಪ್ಪುತ್ತದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು. ಈ ಅಂಶಗಳನ್ನು ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ ಎಕ್ಸ್ ಖಾತೆ ಸ್ಥಗಿತಗೊಳಿಸಿತ್ತು. ಇದೀಗ ಹೈಕೋರ್ಟ್ ಸಡಿಲಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಸರ್ಕಾರಿ ನೌಕರನ ವಿರುದ್ಧ ಅನುಮಾನವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣವಾಗಲಿದೆ: ಹೈಕೋರ್ಟ್