ಬೆಂಗಳೂರು : ಕೊರೊನಾ ವೈರಸ್ ಸೋಂಕು ಹಬ್ಬಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಟ್ಟು ಜೈಲು ಸೇರಿರುವ ಸಾಫ್ಟ್ವೇರ್ ಎಂಜಿನಿಯರ್ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಹಬ್ಬಿಸಲು ಕರೆ ನೀಡಿದ ಆರೋಪದಡಿ ಜೈಲುಸೇರಿರುವ ಸಾಫ್ಟ್ವೇರ್ ಎಂಜಿನಿಯರ್ ಮೊಹಮ್ಮದ್ ಮುಜೀಬ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿತು.
ಪೀಠವು ತನ್ನ ಆದೇಶದಲ್ಲಿ ಆರೋಪಿ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾನೆ. ಸಾಕಷ್ಟು ವಿದ್ಯಾವಂತನಾಗಿ, ಉತ್ತಮ ಹುದ್ದೆಯಲ್ಲಿರುವ ಈತನಿಗೆ ತನ್ನ ಕಾರ್ಯಗಳ ಕುರಿತು ಅರಿವಿರಬೇಕು. ಹಾಗಿದ್ದು ಈತ ಸಾಮಾಜಿಕ ಜಾಲತಾಣದಲ್ಲಿ ದೇಶದ ಸಾಮರಸ್ಯ, ಭಾತೃತ್ವ ಹಾಗೂ ಐಕ್ಯತೆಗೆ ಧಕ್ಕೆಯಾಗುವ ರೀತಿಯಲ್ಲಿ ಪೋಸ್ಟ್ ಹಾಕಿದ್ದಾನೆ. ಇಡೀ ದೇಶವೇ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಈತ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿದ್ದಾನೆ.
ಆರೋಪಿಯ ವಿರುದ್ಧ ಧಾರ್ಮಿಕ ಮೂಲಭೂತವಾದ ಹಾಗೂ ದೇಶ ವಿರೋಧಿ ಚಿಂತನೆ ಹೊಂದಿದ್ದ ಎಂಬ ಮಾಹಿತಿ ಇದೆ. ಈ ಕುರಿತು ಎನ್ಐಎ ಕೂಡ ಆರೋಪಿಯ ಸಂಪರ್ಕಿತ ವ್ಯಕ್ತಿಗಳ ತನಿಖೆ ನಡೆಸುತ್ತಿದೆ. ಅದೇ ರೀತಿ ಪ್ರಕರಣ ತನಿಖಾ ಹಂತದಲ್ಲಿದೆ. ಹೀಗಾಗಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆರೋಪಿ ಮೊಹಮ್ಮದ್ ಮುಜೀಬ್ ತನ್ನ ಫೇಸ್ಬುಕ್ ಅಕೌಂಟ್ನಲ್ಲಿ 'ಹೊರಗೆ ಹೋಗಿ ಸಾರ್ವಜನಿಕ ಪ್ರದೇಶದಲ್ಲಿ ಬಾಯಿ ಮುಚ್ಚಿಕೊಳ್ಳದೆ ಸೀನಿ. ವೈರಸ್ ಹರಡಲು ಕೈ ಜೋಡಿಸೋಣ. ಜಗತ್ತನ್ನು ಕೊನೆಗೊಳಿಸೋಣ' ಎಂದು ಬರೆದುಕೊಂಡಿದ್ದ. ಈ ಕುರಿತು ಮಹೇಶ್ ಮಲ್ಲಯ್ಯನವರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಮುಜೀಬ್ ನನ್ನು ಮಾರ್ಚ್ 9 ರಂದು ಬಂಧಿಸಿದ್ದರು.