ಬೆಂಗಳೂರು: ಒಳಚರಂಡಿ ನೀರಿನ ಹರಿವಿನಿಂದ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಕಾವೇರಿ ಹಾಗೂ ಕನ್ನಿಕೆ ನದಿಪಾತ್ರದಲ್ಲಿ ಉಂಟಾಗಿರುವ ಜಲ ಮಾಲಿನ್ಯ ಸ್ವಚ್ಛಗೊಳಿಸುವ ಕಾಮಗಾರಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಹೈಕೋರ್ಟ್ 15 ದಿನಗಳ ಕಾಲಾವಕಾಶ ನೀಡಿದೆ. ಸ್ಥಳೀಯ ನಿವಾಸಿ ಎಸ್.ಇ. ಜಯಂತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠ ಕಾಲಾವಕಾಶ ನೀಡಿ ಆದೇಶಿಸಿತು.
ವಿಚಾರಣೆ ವೇಳೆ ಕಾವೇರಿ ನಿರಾವರಿ ನಿಗಮದ ಪರ ವಕೀಲರು ಹಾಜರಾಗಿ, ಭಾಗಮಂಡಲದಲ್ಲಿ ಕಾವೇರಿ ಮತ್ತು ಕನ್ನಿಕೆ ನದಿಪಾತ್ರದಲ್ಲಿ ಉಂಟಾಗಿರುವ ಮಾಲಿನ್ಯ ಸ್ವಚ್ಛಗೊಳಿಸುವ ಕಾರ್ಯ ನಡೆಸಲು ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ನದಿಪಾತ್ರದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಕಾಮಗಾರಿ ನಿಗದಿತ ಅಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು. ಸದ್ಯ ನೀರಿನ ಪ್ರಮಾಣ ಕಡಿಮೆಯಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಹಾಗಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ ಕಾಮಗಾರಿ ಪೂರ್ಣಗೊಳಿಸಲು ಕಾವಲಾವಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ, ಕಾವೇರಿ ಹಾಗೂ ಕನ್ನಿಕೆ ನದಿಪಾತ್ರದಲ್ಲಿ ಉಂಟಾಗಿರುವ ಮಾಲಿನ್ಯವನ್ನು ಸ್ವಚ್ಛಗೊಳಿಸುವ ಕಾಮಗಾರಿಯನ್ನು ಎರಡು ತಿಂಗಳ ಅವಧಿಯಲ್ಲಿ (ಮಾರ್ಚ್ 24ರೊಳಗೆ) ಪೂರ್ಣಗೊಳಿಸುವಂತೆ ಕಾವೇರಿ ನಿರಾವರಿ ನಿಗಮಕ್ಕೆ 2023ರ ಫೆ.6ರಂದು ಹೈಕೋರ್ಟ್ ಆದೇಶಿಸಿತ್ತು.
ಪ್ರಕರಣದ ಹಿನ್ನೆಲೆ: ಭಾಗಮಂಡಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸುವ ಯೋಜನೆಯಿಂದ ನದಿ ಮಾಲಿನ್ಯವಾಗುತ್ತಿದೆ ಮತ್ತು ನದಿಪಾತ್ರದಲ್ಲಿ ಒಳಚರಂಡಿ ನೀರು ಹರಿಯುತ್ತಿದೆ. ಆದ್ದರಿಂದ ನದಿಪಾತ್ರದಲ್ಲಿ ಉಂಟಾಗಿರುವ ಮಾಲಿನ್ಯ ಸ್ವಚ್ಛಗೊಳಿಸಲು ಆದೇಶಿಸುವಂತೆ ಕೋರಿ ಸ್ಥಳೀಯ ನಿವಾಸಿ ಜಯಂತ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ವಿಳಂಬ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್