ಬೆಂಗಳೂರು: ರಾಜ್ಯದಲ್ಲಿನ ಮಕ್ಕಳ ಅಪೌಷ್ಟಿಕತೆ ಹಾಗೂ ತಾಯಂದಿರ ಮರಣ ಪ್ರಮಾಣದ ವಿಚಾರ ಕುರಿತು ನ್ಯಾಯಾಲಯದಲ್ಲಿ ಈ ಹಿಂದೆ ನೀಡಿರುವ ಆದೇಶವನ್ನು ಸರ್ಕಾರ ಸಮರ್ಥವಾದ ರೀತಿಯಲ್ಲಿ ಪಾಲಿಸದಿದ್ದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ.
ಈ ಸಂಬಂಧ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿರುವ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಮಕ್ಕಳ ಅಪೌಷ್ಟಿಕತೆ ಹಾಗೂ ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಕೈಗೊಂಡಿರುವ ಕ್ರಮಗಳ ಕರಿತು ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಯಾಕೆ ಇನ್ನೂ ವರದಿ ಸಲ್ಲಿಕೆ ಮಾಡಿಲ್ಲ. ಅಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಹೇಳಿದ್ದಿರಿ. ಅದು ಪಾಲನೆಯಾಗಿಲ್ಲವೆಂದು ತರಾಟೆ ತೆಗೆದುಕೊಂಡಿತು.
ಈ ವೇಳೆ ಸರ್ಕಾರದ ಪರ ವಕೀಲರು ಅಪೌಷ್ಟಿಕತೆ ತಡೆಯಲು ಸರ್ಕಾರ ಕ್ರಮ ಕೈಗೊಂಡಿದೆ. ಅದರ, ಸಮಗ್ರ ಮಾಹಿತಿ ಸಲ್ಲಿಕೆ ಮಾಡಲು ಸಮಯಾವಕಾಶ ನೀಡಬೇಕು ಎಂದು ನ್ಯಾಯಲಯಕ್ಕೆ ಮನವಿ ಮಾಡಿದರು.
ಇದನ್ನು ಪರಿಗಣಿಸಿದ ನ್ಯಾಯಾಲಯ, ಹಿಂದಿನ ಆದೇಶಗಳ ಪಾಲನೆ ಹಾಗೂ ಸಮಗ್ರ ವರದಿಯನ್ನು 1 ತಿಂಗಳಲ್ಲಿ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ.