ಬೆಂಗಳೂರು : ಆದಾಯ ಮೀರಿ ಆಸ್ತಿಗಳಿಕೆ ಆರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬ ಸದಸ್ಯರ ವಿರುದ್ಧದ ಪ್ರಕರಣದ ತನಿಖೆಗೆ ಫೆ. 24ರ ವರೆಗೂ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ವಿರುದ್ಧ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ಧ ನ್ಯಾಯಪೀಠ, ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರ ಶಿವಕುಮಾರ್ ಅವರ ಪರವಾಗಿ ವಾದ ಮಂಡಿಸಿದ ಸಿ.ಹೆಚ್.ಜಾಧವ್, ಅಕ್ರಮ ಆಸ್ತಿಗಳಿಕೆ ಆರೋಪದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ಮಾನಸಿಕ ಒತ್ತಡ ಹೇರಲಾಗುತ್ತಿದೆ. ಹೆಂಡತಿ, ಪುತ್ರಿ ಸೇರಿದಂತೆ ಕುಟುಂಬದ ಸದಸ್ಯರಿಗೆ ನೋಟಿಸ್ ಜಾರಿ ಮಾಡುವ ತೊಂದರೆ ನೀಡಲಾಗುತ್ತಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ನೋಟಿಸ್ ನೀಡುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 2023ರಲ್ಲಿ ತೊಂದರೆ ನೀಡುವುದಕ್ಕಾಗಿ 2020ರಲ್ಲಿಯೇ ಪ್ರಕರಣ ದಾಖಲಿಸಿದ್ದಾರೆಯೇ?. ಹಾಗಾದರೆ ಪ್ರಾರಂಭದಲ್ಲಿಯೇ ಎಫ್‌ಐಆರ್ ಅನ್ನು ಏಕೆ ಪ್ರಶ್ನಿಸಿಲ್ಲ ಎಂದು ಶಿವಕುಮಾರ್ ಅವರ ಪರ ವಕೀಲರಿಗೆ ನ್ಯಾಯಪೀಠ ಪ್ರಶ್ನೆ ಮಾಡಿತು. ಎಫ್‌ಐಆರ್ ದಾಖಲಿಸಿ ಎರಡು ವರ್ಷ ಕಳೆದಿದೆ. ಈವರೆಗೂ ಏನು ತನಿಖೆ ನಡೆಸಿದ್ದೀರಿ? ತನಿಖೆಯ ಅಂತಿಮ ವರದಿಯನ್ನು ಯಾವಾಗ ಸಲ್ಲಿಸುತ್ತೀರಿ ಎಂದು ಸಿಬಿಐ ಪರ ವಕೀಲರಿಗೂ ಪ್ರಶ್ನಿಸಿತು.
ತನಿಖಾಧಿಕಾರಿಗಳು ತನಿಖೆಯ ಪ್ರಗತಿ ವರದಿಯನ್ನು ನ್ಯಾಯಪೀಠಕ್ಕೆ ಹಾಜರುಪಡಿಸಲಿ. ಅಲ್ಲಿಯವರೆಗೂ ತನಿಖೆಗೆ ತಡೆ ನೀಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿ ವಿಚಾರಣೆ ಮುಂದೂಡಿತು. ಈ ಹಿಂದೆ ಅರ್ಜಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಕಾರಣಕ್ಕಾಗಿ ಕಿರುಕುಳ ನೀಡಲಾಗುತ್ತಿದ್ದು, ಅವರ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಹತ್ತಿರವಾಗುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅವರಿಗೆ ತೊಂದರೆ ನೀಡಬೇಕೆಂದು ಸತಾಯಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಅರ್ಜಿದಾರರು ಸಾರ್ವಜನಿಕ ಸೇವಕರಾಗಿದ್ದು, ಅವರ ವಿರುದ್ಧ ದಾಖಲಿಸಿರುವ ಈ ಪ್ರಕರಣದಲ್ಲಿ ಅವರ ಕುಟುಂಬದ ಸದಸ್ಯರೆಲ್ಲರ ಆದಾಯವನ್ನು ಪರಿಗಣಿಸಲಾಗಿದೆ. ಜಾಮೀನು ದೊರೆತ ಮೇಲೆ ಜಾರಿ ನಿರ್ದೇಶನಾಲಯದ ಮಾಹಿತಿ ಅನುಸಾರ ಸಿಬಿಐ ಕೇಸು ದಾಖಲಿಸಿದೆ. ಇದೆಲ್ಲಾ ಅರ್ಜಿದಾರರಿಗೆ ಕೇವಲ ಕಿರುಕುಳ ನೀಡಬೇಕೆಂಬ ದುರುದ್ದೇಶಪೂರಿತ ಕ್ರಮವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿ, ಅರ್ಜಿದಾರರು ಪ್ರಕರಣದ ತನಿಖೆಗೆ ತಡೆ ಕೇಳುತ್ತಿಲ್ಲ. ಅವರು ಕೇಳುತ್ತಿರುವುದು ಕೇವಲ ಅವರ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಕರೆಸಬಾರದು ಎಂದಷ್ಟೇ. ನಾವು ಅವರ ಕುಟುಂಬದ ಸದಸ್ಯರಿಗೆ ನೋಟಿಸ್ ನೀಡಿಯೇ ಇಲ್ಲ. ಕಾಲೇಜಿನ ಪ್ರಿನ್ಸಿಪಾಲರನ್ನು ಕರೆದು ವಿಚಾರಣೆ ನಡೆಸಿದರೆ ಅವರು ಹೇಗೆ ಕುಟುಂಬದ ಸದಸ್ಯರಾಗುತ್ತಾರೆ ಎಂದು ಪ್ರಶ್ನಿಸಿದ್ದರು.
ಅಲ್ಲದೆ, ಅರ್ಜಿದಾರರ ಪುತ್ರಿಗೆ ಪ್ರಸ್ತುತ 21 ವರ್ಷ. ಆಕೆ ಕೊಟ್ಯಧಿಪತಿಯಾಗಿದ್ದಾರೆ. ಈಕೆಗೇನು ದುಡ್ಡು ಆಕಾಶದಿಂದ ಉದುರಿದಿಯೇ? ಎಂದು ಕೇಳಿದರು. ಆರೋಪಿಗಳನ್ನು ಬಂಧಿಸಬಾರದು ಅಂತಾ ಈ ಹಿಂದೆಯೇ ಏಕಸದಸ್ಯ ನ್ಯಾಯಪೀಠದ ಆದೇಶವಿದೆ. ಅರ್ಜಿದಾರರು ಈ ಮೊದಲೇ ತಡೆ ಕೋರಿದ್ದ ಮನವಿಯನ್ನು ಹೈಕೋರ್ಟ್ ಆರಂಭದಲ್ಲೇ ತಿರಸ್ಕರಿಸಿದೆ. ತನಿಖೆ ಶುರುವಾಗಿ ಎರಡೂವರೆ ವರ್ಷ ಕಳೆದಿದೆ. ಈಗಲೂ ಕೂಡಾ ತಡೆ ಕೋರಿ ಯಾವುದೇ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿಲ್ಲ. ಹೀಗಾಗಿ ವಿಚಾರಣೆಗೆ ತಡೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ: ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಈ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಡಿಕೆಶಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಜೀವನಾಂಶದ ಅರ್ಜಿಗಳು ಕಾಲಮಿತಿಯಲ್ಲಿ ಇತ್ಯರ್ಥವಾಗಲಿ: ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ