ಬೆಂಗಳೂರು: ವೈದ್ಯರ ನಿರ್ಲಕ್ಷದಿಂದ ರೋಗಿ ಸಾವನ್ನಪ್ಪಿದ್ದಾರೆಂಬ ಆರೋಪಗಳು ಇತ್ತೀಚೆಗೆ ಹೆಚ್ಚುತ್ತಿವೆ. ಆದರೆ, ವೈದ್ಯರ ತಪ್ಪಿಲ್ಲದೆ ರೋಗಿಗಳು ಸಾವನ್ನಪ್ಪಿದಾಗ ಅವರಿಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವೈದ್ಯರ ನಿರ್ಲಕ್ಷ್ಯದಿಂದ ತನ್ನ ಅಮ್ಮ ಸಾವನ್ನಪ್ಪಿದ್ದಾರೆ ಎಂದು ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಧಾವಂತದ ಜಗತ್ತಿನಲ್ಲಿರುವ ಜನ ಅವಕಾಶ ಸಿಕ್ಕಾಗೆಲ್ಲಾ ವೈದ್ಯರ ಮೇಲೆ ಇಲ್ಲಸಲ್ಲದ ಆಪಾದನೆ ಹೊರಿಸುತ್ತಿದ್ದಾರೆ. ಅಂಕಿ-ಅಂಶಗಳನ್ನು ಗಮನಿಸಿದರೆ, ವೈದ್ಯರು ಮತ್ತು ವೈದ್ಯಾಧಿಕಾರಿಗಳ ವಿರುದ್ಧ ದಾಖಲಾಗುವ ಬಹುತೇಕ ಪ್ರಕರಣಗಳಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಹಲಸೂರಿನ 65 ವರ್ಷದ ವೃದ್ಧೆಯೊಬ್ಬರು ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆ ಮಾಡಿಸಿಕೊಂಡ 6 ತಿಂಗಳ ಬಳಿಕ ಸಾವನ್ನಪ್ಪಿದ್ದರು. ಆ್ಯಂಜಿಯೊಪ್ಲಾಸ್ಟಿ ಮಾಡಿದ ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ತಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತ ವೃದ್ಧೆಯ ಪುತ್ರ ಕರ್ನಾಟಕ ವೈದ್ಯಕೀಯ ಮಂಡಳಿ(ಕೆಎಂಸಿ)ಗೆ ದೂರು ಸಲ್ಲಿಸಿದ್ದರು. ವೈದ್ಯಕೀಯ ಮಂಡಳಿ, ಪ್ರಕರಣದಲ್ಲಿ ವೈದ್ಯರ ವೃತ್ತಿ ಲೋಪವೇ ಸಾವಿಗೆ ಕಾರಣ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿತ್ತು. ಈ ಆದೇಶ ಪ್ರಶ್ನಿಸಿ ಡಾ. ಗಣೇಶ್ ನಾಯಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್. ವೈದ್ಯರ ಔಷಧಿ ಉಪಚಾರಗಳಿಂದ ಬಹುತೇಕ ರೋಗಿಗಳು ಗುಣಮುಖರಾಗುತ್ತಾರೆ. ಆದರೆ, ಕೆಲವೇ ವ್ಯಕ್ತಿಗಳು ಇದಕ್ಕೆ ಅಪವಾದವಾಗಿ ಸಾವನ್ನಪ್ಪುತ್ತಾರೆ. ಅಂತಹ ಪ್ರಕರಣಗಳಲ್ಲಿ ರೋಗಿಗೆ ಉಂಟಾಗುವ ಎಲ್ಲ ತೊಂದರೆಗಳೂ ವೈದ್ಯಕೀಯ ನಿರ್ಲಕ್ಷ್ಯದಿಂದ ಆಗುತ್ತವೆ ಎಂದು ಭಾವಿಸುವುದು ಸರಿಯಲ್ಲ. ಆಸ್ಪತ್ರೆಗಳಲ್ಲಿ ಸಾವು ಸಂಭವಿಸಿದಾಗ, ವೈದ್ಯರ ನಿರ್ಲಕ್ಷ್ಯದಿಂದಲೇ ರೋಗಿ ಮೃತಪಟ್ಟರು ಎಂದು ಆರೋಪಿಸುವ ಹಲವಾರು ಪ್ರಕರಣಗಳಲ್ಲಿ ರೋಗಿಯು ದೀರ್ಘಕಾಲೀನ ರೋಗಗಳಿಂದ ಬಳಲುತ್ತಿರುವ ಕಾರಣಗಳನ್ನು ಮರೆಮಾಚಲಾಗಿರುತ್ತದೆ. ಇದರಿಂದಾಗಿ ವೈದ್ಯರು ಮತ್ತು ರೋಗಿಗಳ ನಡುವಿನ ಆರೋಗ್ಯಕರ ಸಂಬಂಧ ಹಳಸುತ್ತಿದೆ ಎಂದು ಪೀಠ ಹೇಳಿದೆ.
ಅಲ್ಲದೇ, ಈ ಪ್ರಕರಣದಲ್ಲಿ ಮೃತ ಮಹಿಳೆ ಆ್ಯಂಜಿಯೊಪ್ಲಾಸ್ಟಿ ಮಾಡಿಸಿಕೊಳ್ಳುವ ಮುನ್ನ ಮಧುಮೇಹ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂಬುದು ಮೇಲ್ನೋಟಕ್ಕೆ ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬರುತ್ತದೆ. ಹಾಗಾಗಿ ಇದು ವೈದ್ಯರ ನಿರ್ಲಕ್ಷ್ಯದಿಂದಲೇ ಸಂಭವಿಸಿದ ಸಾವು ಎಂಬುದನ್ನು ಸಾಬೀತುಪಡಿಸುವ ಅಂಶಗಳು ಕಂಡು ಬರುತ್ತಿಲ್ಲ. ಹಾಗಿದ್ದೂ, ತಮ್ಮ ಮೇಲೆ ಹಲ್ಲೆ ನಡೆಸಿದವರಲ್ಲೇ ವೈದ್ಯರು ಕ್ಷಮೆ ಕೇಳುವುದನ್ನು ನೋಡಿದಾಗ ಇದು ಸುಶಿಕ್ಷಿತ ಸಮಾಜದ ಲಕ್ಷಣವಲ್ಲ ಎನಿಸುತ್ತದೆ ಎಂದು ವೈದ್ಯರ ಮೇಲಿನ ದಾಳಿಗಳ ಕುರಿತು ಕಳವಳ ವ್ಯಕ್ತಪಡಿಸಿ, ಕೆಎಂಸಿ ಆದೇಶವನ್ನು ರದ್ದುಪಡಿಸಿದೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ