ಬೆಂಗಳೂರು: ಕೇಂದ್ರ-ರಾಜ್ಯ ಸರ್ಕಾರಗಳು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡ್ತಿವೆ. ಬಂದ್ ವಿಫಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಕಾರ್ಮಿಕ ನಾಯಕಿ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಅಸಮಾಧಾನ ಹೊರಹಾಕಿದರು.
ನಗರದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ ಅವರು, ಬಳಿಕ ಟೌನ್ಹಾಲ್ನ ಪ್ರತಿಭಟನಾ ಮೆರವಣಿಗೆ ಜೊತೆ ಸೇರಿಕೊಂಡರು. ಈ ವೇಳೆ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆಗೆ ಅವಕಾಶ ಕೊಡದೆ ಬ್ಯಾರಿಕೇಡ್ ಹಾಕಿ ತಡೆಯಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ವರಲಕ್ಷ್ಮೀ, ಸರ್ಕಾರ ಪ್ರತಿಭಟನೆ ಹತ್ತಿಕ್ಕಲು, ಬಂದ್ ವಿಫಲಗೊಳಿಸಲು ನಿನ್ನೆಯಿಂದಲೇ ಎಲ್ಲಾ ಮುಖಂಡರಿಗೆ ನೋಟಿಸ್ ಜಾರಿ ಮಾಡಿದೆ. ಮುಚ್ಚಳಿಕೆ ಬರೆಸಿಕೊಂಡಿದೆ.
ಬಂದ್ ಆಗ್ತಿಲ್ಲ ಎಂದು ಬಿಂಬಿಸಲು ನಮ್ಮ ಎಲ್ಲಾ ಪ್ರತಿಭಟನಾಕಾರರ ವಾಹನಗಳನ್ನು ತಡೆ ಹಿಡಿದಿದ್ದಾರೆ. ದೇವನಹಳ್ಳಿ, ರಾಮನಗರದಲ್ಲಿ ವಾಹನಗಳನ್ನು ತಡೆ ಹಿಡಿದಿದ್ದಾರೆ. ಏನೇ ಮಾಡಿದರೂ ನಮ್ಮ ಬಂದ್ ಯಶಸ್ವಿಯಾಗಲಿದೆ. ನಾವು ಯಾವುದೇ ಹಿಂಸಾಚಾರ ಮಾಡದೆ ಬಂದ್ ಮಾಡುತ್ತೇವೆ. ನಮ್ಮ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.