ಬೆಂಗಳೂರು: ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಹಾಗೂ ನಿರುಪಯುಕ್ತವಾಗಿರುವ ಸರ್ಕಾರದ ಬಿ- ಖರಾಬು ಭೂಮಿಯನ್ನು ಖಾಸಗಿಯವರಿಗೆ ಹಣ ಪಡೆದು ಮಂಜೂರು ಮಾಡಲು ಹಾಗೂ ಗುತ್ತಿಗೆಗೆ ನೀಡಲು 'ಕರ್ನಾಟಕ ಭೂ ಮಂಜೂರಾತಿ ನಿಯಮಗಳು-1969’ಕ್ಕೆ ತಿದ್ದುಪಡಿ ಮಾಡಿ ಮಂಜೂರಾತಿ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಆ ಮೂಲಕ ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ.ಮೀ. ಹಾಗೂ ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ ವರೆಗಿನ ಬಿ- ಖರಾಬು ಭೂಮಿಯನ್ನು ಮಾರಾಟ ಮಾಡಲು ದರ ನಿಗದಿ ಮಾಡಿ ಆದೇಶಿಸಿದ್ದು, ಮಾರುಕಟ್ಟೆ ದರದ ನಾಲ್ಕು ಪಟ್ಟು ದರಕ್ಕೆ ಹಾಗೂ ಅತಿ ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿದೆ.
ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಖರಾಬು ಭೂಮಿ ಮಾರಾಟಕ್ಕೆ ನಿರ್ಧರಿಸಲಾಗಿತ್ತು. ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಭೂ ಕಂದಾಯ ಕಾಯಿದೆ -1964 ಕಲಂ 2 ಕ್ಕೆ ತಿದ್ದುಪಡಿ ತಂದು ಬೆಂಗಳೂರು ಹಾಗೂ ಇತರ ನಗರ ಪ್ರದೇಶದಲ್ಲಿ ಒತ್ತುವರಿಯಾಗಿರುವ ಹಾಗೂ ಕಟ್ಟಡಗಳ ನಡುವೆ ಸಿಲುಕಿರುವ ನಿರುಪಯುಕ್ತ ಬಿ- ಖರಾಬು ಭೂಮಿಯನ್ನು ಮಾರಾಟ ಮಾಡಲಾಗುವುದು. ಇದಕ್ಕಾಗಿ ಮಾರ್ಗಸೂಚಿ ದರದ ನಾಲ್ಕು ಪಟ್ಟು ಹೆಚ್ಚು ದರ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದರು.
ಇದನ್ನೂ ಓದಿ : 2004ರ ಬಳಿಕ ಭಾರತದಲ್ಲಿ ಮಸೂದೆಗಳ ವಿರುದ್ಧ ನಡೆದ ಪ್ರತಿಭಟನೆಗಳಿವು!
ನವೆಂಬರ್ 21 ರಂದು ಈ ಕುರಿತ ಕರಡು ನಿಯಮಗಳನ್ನು ಪ್ರಕಟಿಸಿದ್ದ ಕಂದಾಯ ಇಲಾಖೆ ಡಿಸೆಂಬರ್ 16 ರಂದು ಕರ್ನಾಟಕ ಭೂ ಮಂಜೂರಾತಿ ನಿಯಮ -1969 ರ 22 - ಎ ಉಪ ನಿಯಮ 1ಕ್ಕೆ ತಿದ್ದುಪಡಿ ತಂದು ಅಂತಿಮ ನಿಯಮಾವಳಿ ಪ್ರಕಟಿಸಿದೆ.
ಮಾನದಂಡಗಳೇನು? :
ನಿಯಮಗಳಲ್ಲಿ ಕಾಲುವೆಗಳು, ಮಳೆ ನೀರು ಕಾಲುವೆ, ಚರಂಡಿಗಳು, ಕೆರೆಗಳು, ಜಲಮೂಲಗಳು ಮಾರಾಟ ಅಥವಾ ಗುತ್ತಿಗೆ ನೀಡುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಉಳಿದಂತೆ ಕೃಷಿ ಭೂಮಿ ನಡುವಿನ ಖರಾಬು ಭೂಮಿಗೆ ಸುತ್ತಮುತ್ತಲಿನ ಕೃಷಿ ಭೂಮಿಯ ಮಾರ್ಗಸೂಚಿ ದರದ ಆಧಾರದ ಮೇಲೆ ಮಾರ್ಗಸೂಚಿ ದರ ನಿಗದಿ ಮಾಡಬೇಕು.
ಭೂ ಪರಿವರ್ತನೆಯಾಗಿ ನಕ್ಷೆ ಮಂಜೂರಾತಿ ಪಡೆಯದ ನಿವೇಶನಗಳಿಗೆ ಕೇಂದ್ರ ಮೌಲ್ಯಮಾಪನ ಸಮಿತಿಯು ಆಯಾ ಸಮಯದಲ್ಲಿ ದರ ನಿಗದಿ ಮಾಡಬೇಕು. ಭೂ ಪರಿವರ್ತನೆಯಾಗಿ ನಕ್ಷೆ ಮಂಜೂರಾತಿ ಪಡೆದ ಬಡಾವಣೆಗಳ ನಡುವಿನ ಖರಾಬು ಭೂಮಿಗೆ ಬಡಾವಣೆಯಲ್ಲಿನ ಪ್ರತಿ ಚದರಡಿಯ ಮಾರ್ಗಸೂಚಿ ದರದ ಆಧಾರದ ಮೇಲೆ ದರ ನಿಗದಿ ಮಾಡಬೇಕೆಂದು ಆದೇಶಿಸಲಾಗಿದೆ.
ಪ್ರತ್ಯೇಕ ದರ ನಿಗದಿ :
ಉದ್ಯಮ ಬಳಕೆಗಾಗಿ ಖರೀದಿಸುವವರಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ (ಎಸ್ಸಿ-ಎಸ್ಟಿಗೆ) ಮಾರ್ಗಸೂಚಿ ದರದ ಶೇ.50, ಇತರರಿಗೆ ಮಾರುಕಟ್ಟೆ ದರದಷ್ಟು ಪಾವತಿಸುವಂತೆ ನಿಗದಿ ಮಾಡಲಾಗಿದೆ. ಉಳಿದಂತೆ ಗುತ್ತಿಗೆ ಆಧಾರದ ಮೇಲೆ ನೀಡುವುದಾದರೆ ಎಸ್ಸಿ - ಎಸ್ಟಿ ಅರ್ಜಿದಾರರಿಗೆ ಮಾರ್ಗಸೂಚಿ ದರದ ಶೇ.2.5, ಹಾಗೂ ಇತರರಿಗೆ ಮಾರುಕಟ್ಟೆ ದರದ ಶೇ.2.5 ರಷ್ಟು ನಿಗದಿ ಮಾಡಲಾಗಿದೆ.
ಶಿಕ್ಷಣ ಸಂಸ್ಥೆಗಳ ಬಳಕೆಗೆ ಎಸ್ಸಿ - ಎಸ್ಟಿಗೆ ಮಾರ್ಗಸೂಚಿ ದರದ ಶೇ. 50, ಇತರರಿಗೆ ಮಾರುಕಟ್ಟೆ ದರ, ಗುತ್ತಿಗೆಗೆ ನೀಡುವುದಾದರೆ ಎಸ್ಸಿ - ಎಸ್ಟಿಗೆ ಮಾರ್ಗಸೂಚಿ ದರದ ಶೇ.2.5, ಇತರರಿಗೆ ಮಾರುಕಟ್ಟೆ ದರದ ಶೇ. 2.5 ರಷ್ಟು ನಿಗದಿಪಡಿಸಲಾಗಿದೆ.
ಇದನ್ನೂ ಓದಿ : ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾರ್ಗಸೂಚಿ ತಿದ್ದುಪಡಿ ಮಾಡಿದ ಆದೇಶ ಪ್ರಕಟ
ಕಲ್ಯಾಣ ಕಾರ್ಯಕ್ರಮಗಳ ಅಡಿಗೆ ಬರುವ ವಿದ್ಯಾರ್ಥಿನಿಲಯ, ಆಸ್ಪತ್ರೆ, ಅನಾಥಾಶ್ರಮ, ವೃದ್ಧಾಶ್ರಮದ ಬಳಕೆಗೆ ಎಸ್ಸಿ - ಎಸ್ಟಿಯವರಿಗೆ ಮಾರ್ಗಸೂಚಿ ದರದ ಶೇ.10, ಇತರರಿಗೆ ಮಾರುಕಟ್ಟೆ ಬೆಲೆಯ ಶೇ.2.5, ಗುತ್ತಿಗೆ ಆಧಾರದ ಮೇಲೆ ನೀಡುವುದಾದದರೆಗೆ ಎಸ್ಸಿ-ಎಸ್ಟಿಗೆ ಮಾರ್ಗಸೂಚಿ ದರದ ಶೇ.2.5, ಇತರರಿಗೆ ಮಾರ್ಗಸೂಚಿ ದರದ ಶೇ.2.5 ಹಾಗೂ ಧಾರ್ಮಿಕ ಟ್ರಸ್ಟ್‌ಗಳಿಗೆ ಎಸ್ಸಿ- ಎಸ್ಟಿಗೆ ಮಾರ್ಗಸೂಚಿ ದರದ ಶೇ.25, ಇತರರಿಗೆ ಮಾರ್ಗಸೂಚಿ ದರದ ಶೇ.50, ಗುತ್ತಿಗೆಗೆ ನೀಡಲು ಎಸ್ಸಿ- ಎಸ್ಟಿಗೆ ಹಾಗೂ ಇತರ ವರ್ಗಗಳಿಗೆ ಇಬ್ಬರಿಗೂ ಮಾರ್ಗಸೂಚಿ ದರದ ಶೇ. 2.5 ರಷ್ಟು ದರ ನಿಗದಿ ಮಾಡಲಾಗಿದೆ.
ಕೃಷಿ ಬಳಕೆಗೆ ಹಾಗೂ ಕೃಷಿಯೇತರ ಬಳಕೆಗೆ ಎಸ್ಸಿ-ಎಸ್ಟಿ ವರ್ಗದವರಿಗೆ ಮಾರ್ಗಸೂಚಿ ದರದ ಶೇ.2.5, ಇತರರಿಗೆ ಮಾರ್ಗಸೂಚಿ ದರದ ಶೇ.50 ರಷ್ಟು, ಗುತ್ತಿಗೆಗೆ ನೀಡುವುದಾದರೆ ಕೃಷಿ ಬಳಕೆಗೆ ವರ್ಷದ ಭೂಮಿ ಆದಾಯದ 20 ಪಟ್ಟು ಹಣವನ್ನು ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.