ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ, ಸರ್ಕಾರ ಹಾಗೂ ಟೆಲಿಕಾಂ ಕಂಪನಿಗಳ ಬೊಕ್ಕಸಕ್ಕೆ ದೊಡ್ಡ ಹೊಡೆತ ಕೊಡುತ್ತಿದ್ದ ಖತರ್ನಾಕ್ ಗ್ಯಾಂಗ್ಅನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಡೆನಿಸ್, ಬಿಪಿನ್ ಸೇರಿ ಐವರು ಆರೋಪಿಗಳನ್ನ ಜೈಲಿಗಟ್ಟಲಾಗಿದೆ. ಇವರು SIP trunk line ಡಿವೈಸ್ ಇಟ್ಟುಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು.
ಟೈಮ್ ಇನ್ಫೋ ಟೆಕ್ನಾಲಜಿ ಎಂಬ ಕಂಪನಿ: ಕೋರಮಂಗಲದ ಬಿಜ್ ಹಬ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್ನ 1,500 ಸಿಪ್ ಪೋರ್ಟಲ್ ಸಂಪರ್ಕ ಪಡೆದು 40 ದಿನಗಳಲ್ಲಿ ಒಟ್ಟು 68 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಯನ್ನು ಸ್ಥಳೀಯ ಕರೆಯಾಗಿ ಮಾರ್ಪಡಿಸಿದ್ದರು. ಅಂತೆಯೇ ಮೈಕೋ ಲೇಔಟ್ ಆರ್ಚರ್ ಟೆಕ್ನಾಲಜಿಯಿಂದ 900 ಸಿಪ್ ಪೋರ್ಟಲ್ ಸಂಪರ್ಕ ಪಡೆದು, 60 ದಿನಗಳಲ್ಲಿ ಬರೋಬ್ಬರಿ 24 ಲಕ್ಷ ನಿಮಿಷಗಳ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡಿದ್ದರು. ಟೈಮ್ ಇನ್ಫೋ ಟೆಕ್ನಾಲಜಿ ಎಂಬ ಕಂಪನಿ ತೆರೆದು ವಂಚಿಸಿದ್ದರು.
ಇವರು ಬಳಸುತ್ತಿದ್ದ ಪಿಆರ್ಐ ಡಿವೈಸ್ 1 ನಿಮಿಷಕ್ಕೆ ಲಕ್ಷಾಂತರ ಇಂಟರ್ ನ್ಯಾಷನಲ್ ಕಾಲ್ ಗಳನ್ನು ಲೋಕಲ್ ಕಾಲ್ಗಳಾಗಿ ಪರಿವರ್ತಿಸುತ್ತಿತ್ತು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ವಿಓಐಪಿ (ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್) ಕಾಲ್ಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದರು. ಗಲ್ಫ್ ಕಂಟ್ರಿಗಳಲ್ಲಿ ಡೇಟಾ ಕಾಲನ್ನು ಬೇರೆ ಸರ್ವರ್ಗೆ ಕಳುಹಿಸಿ ಇಂಟರ್ನೆಟ್ ಸಹಾಯದಿಂದ ಕಾಲ್ಗಳನ್ನು ಕನ್ವರ್ಟ್ ಮಾಡುತ್ತಿದ್ದರು.
ಇದನ್ನೂ ಓದಿ: ಐಎಸ್ಡಿ ಕರೆ ಪರಿವರ್ತನೆ ಪ್ರಕರಣ: ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ಸಂಸ್ಥೆಗಳು
ಟೂರಿಸಂ ಕಸ್ಟಮರ್ ಕೇರ್ ಮಾಡುತ್ತೇವೆ ಎಂದು ಕಂಪನಿ ತೆರೆದು ಆರೋಪಿಗಳು ವಂಚಿಸಿದ್ದರು. ಸದ್ಯ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.