ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ನಾನು ಟೀಕೆ ಮಾಡಲ್ಲ. ಅವರು ಸಂಘಟನೆ ದೃಷ್ಟಿಯಿಂದ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ನಾವು "ಜಲಧಾರೆ" ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಎರಡನೇ ಹಂತದ ‘ಜನತಾ ಸಂಗಮ’ದ ಸಂಘಟನಾ ಕಾರ್ಯಾಗಾರಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಲ್ಲಿ ನಮ್ಮ ಸರ್ಕಾರ ಸಲ್ಲಿಸಿರುವ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ಜಲಧಾರೆ ಎಂಬ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜೊತೆಗೆ ಯಾವ ರೀತಿ ಈ ಕಾರ್ಯಕ್ರಮ ಮಾಡಬೇಕೆಂಬ ಚರ್ಚೆ ಮಾಡುತ್ತಿದ್ದೇವೆ. ಹಾಗಾಗಿ, ನಮ್ಮ ರಾಜ್ಯದ 38 ನದಿ ಹಾಗೂ ಉಪ ನದಿಗಳನ್ನು ಹೇಗೆ ಬಳಕೆ ಮಾಡಬೇಕೆಂಬುದು ಜಲಧಾರೆಯ ಮುಖ್ಯ ಉದ್ದೇಶ. ಜನತೆ ಮುಂದೆ ಈ ಜಲಧಾರೆ ಕಾರ್ಯಕ್ರಮ ಇಡುತ್ತೇವೆ. ಇದನ್ನು ಯಾವ ರೀತಿ ರೂಪಿಸಬೇಕು ಎಂಬುದನ್ನು ಚರ್ಚೆ ಮಾಡುತ್ತಿದ್ದೇವೆ. ಡಿಸೆಂಬರ್ ಕೊನೆ ವಾರ ಅಥವಾ ಜನವರಿಯಲ್ಲಿ ಜಲಧಾರೆ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕಿಸುವುದಿಲ್ಲ ಎಂದ ಹೆಚ್‌ಡಿಕೆ, ನೀರಾವರಿಗಾಗಿ ಹೋರಾಟ ಮಾಡುತ್ತೇವೆ. ಮತಕ್ಕಾಗಿ ಯಾವುದೇ ಗಿಮಿಕ್ ಮಾಡುವುದಿಲ್ಲ. ಕಾಂಗ್ರೆಸ್ ಅವರ ವೇಗ ನಮಗೆ ಬೇಡ. ರೈತರ ಸಾಲಮನ್ನಾ ಯೋಜನೆ ವಿಚಾರದಲ್ಲೂ ಟೀಕೆ ಮಾಡಿದ್ದರು. ಸರ್ಕಾರದ ನಿರ್ಲಕ್ಷ್ಯವನ್ನು ಜನರ ಮುಂದಿಟ್ಟು ನಾವು ಬದ್ಧತೆಯಿಂದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು ಕನ್ನಡಿಗರಿಗಷ್ಟೇ ಅಲ್ಲ, ಎಲ್ಲರಿಗೂ ಜೀವನ ನೀಡಿದೆ. ಎಲ್ಲರಿಗೂ ನಾವು ಗೌರವ, ರಕ್ಷಣೆ ನೀಡುತ್ತಿದ್ದೇವೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡಬೇಕು. ಇದು ನಮ್ಮ ಜವಾಬ್ದಾರಿ. ನಮ್ಮ ನಾಡಿನ ಜನತೆಗೆ ಆಗುವ ನೋವು, ದ್ರೋಹವನ್ನು ಸರಿಪಡಿಸಬೇಕು. ಕುಡಿಯುವ ನೀರನ್ನು ಎಲ್ಲರಿಗೂ ನೀಡಬೇಕು. ಬೆಂಗಳೂರು ಎಲ್ಲರಿಗೂ ಜೀವನಾಧಾರವಾಗಿದೆ. ಎಲೆಕ್ಟ್ರಾನಿಕ್ ಸಿಟಿ, ದೇವನಹಳ್ಳಿ ವಿಮಾನ ನಿಲ್ದಾಣ ನಮ್ಮವರಿಗಿಂತ ಹೊರಗಿನವರಿಗೇ ಹೆಚ್ಚಿನ ಅನುಕೂಲವಾಗಿದೆ. ಈ ವಿಚಾರವನ್ನು ನೆರೆಹೊರೆಯ ರಾಜ್ಯಗಳ ಜನಪ್ರತಿನಿಗಳು ಅರ್ಥ ಮಾಡಿಕೊಳ್ಳಬೇಕು. ಎಲ್ಲ ಭಾಷಿಗರಿಗೂ ಗೌರವ, ರಕ್ಷಣೆ ನೀಡಿದ್ದೇವೆ. ಹಾಗಾಗಿ ಅವರು ನಮಗೂ ಸಹಕಾರ ನೀಡಬೇಕು. ಇದೆಲ್ಲವೂ ಕಾನೂನು ಚೌಕಟ್ಟಿನಲ್ಲಿ ನಡೆಯುವುದಿಲ್ಲ ಎಂದರು.
ಸರ್ಕಾರದ ಗಿಮಿಕ್: ಕಿತ್ತೂರು ಕರ್ನಾಟಕ ಎಂದು ಹೆಸರು ಬದಲಾಯಿಸಿ ಸಿಹಿ ಹಂಚಿ ಸಂಭ್ರಮಿಸುವುದಲ್ಲ, ಜನರ ಬದುಕಿನಲ್ಲಿ ಏನಾದರೂ ಬದಲಾಯಿತೆ? ಎಂದು ಪ್ರಶ್ನಿಸಿದರು. ಇದು ರಾಷ್ಟ್ರೀಯ ಪಕ್ಷದ ನಡವಳಿಕೆ. ಜನರು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಮತದಾರರ ಗಮನ ಸೆಳೆಯುತ್ತಿದ್ದಾರೆ ಅಷ್ಟೆ. ಇದು ಕೂಡ ಅವರ ಗಿಮಿಕ್ ಎಂದು ಟೀಕಿಸಿದರು.
ಸದ್ಯದಲ್ಲೇ ಕೋರ್ ಕಮಿಟಿ:
ಸದ್ಯದಲ್ಲೇ ಕೋರ್ ಕಮಿಟಿ ರಚನೆ ಮಾಡುತ್ತೇವೆ. ಕೋರ್ ಕಮಿಟಿ ಸದಸ್ಯರು ಯಾವ ರೀತಿ ಜವಾಬ್ದಾರಿ ನಿರ್ವಹಣೆ ಮಾಡಬೇಕು ಎಂಬುದು ತಿಳಿಸಲಾಗುವುದು. ಯಾರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೋ ಅಂತಹವರನ್ನು ನೇಮಕ ಮಾಡುತ್ತೇವೆ. 2023 ರ ಗುರಿ ಏನಿದೆ ಅದನ್ನು ಸಾಧಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕಾರ್ಯಾಗಾರ ಮುಗಿದ ನಂತರ ಕೋರ್ ಕಮಿಟಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ:
2023ರ ಸಾರ್ವತ್ರಿಕ ಚುನಾವಣೆಗೆ ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಎರಡನೇ ಹಂತದ 'ಜನತಾ ಸಂಗಮ'ದ ಸಂಘಟನಾ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಸಮರ್ಥವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶೀಘ್ರದಲ್ಲೇ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ತುಮಕೂರು ಮಾಜಿ ಶಾಸಕರು ಹಾಗೂ ಪ್ರಮುಖರ ಸಭೆಯನ್ನು ಇಂದು ಸಂಜೆ ಬಿಡದಿಯ ತೋಟದಲ್ಲಿ ಕರೆಯಲಾಗಿದೆ. ಪರಿಷತ್ ಚುನಾವಣೆ ಸಂಬಂಧ ಚರ್ಚೆ ಮಾಡಲಾಗುವುದು.ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.
ಕಲಬುರಗಿ ಮೇಯರ್ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ಪಕ್ಷ ಯಾವ ನಿಲುವು ತಳೆಯಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಯಾರೂ ಸಂಪರ್ಕ ಮಾಡಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಇನ್ನೂ ಸಮಯಾವಕಾಶವಿದೆ ಎಂದಷ್ಟೆ ಹೇಳಿದರು.
ಇದನ್ನೂ ಓದಿ:ವಿಧಾನ ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್..