ದೇವನಹಳ್ಳಿ: ಕಾಮಗಾರಿ ಹಂತದಲ್ಲಿರುವ ವಿಲ್ಲಾ ಕಟ್ಟಡದ ಒಂದು ಭಾಗವನ್ನು ಸ್ಫೋಟಿಸಲಾಗಿದೆ. ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಿಲ್ಲಾ ಕಟ್ಟಡದ ಮಾಲೀಕನಿಗೆ ಕರೆ ಮಾಡಿದ ವ್ಯಕ್ತಿ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಒಂದು ವೇಳೆ ಹಣ ಕೊಡದಿದ್ದರೆ ವಿಲ್ಲಾ ಕಟ್ಟಡವನ್ನು ಸಂಪೂರ್ಣ ಸ್ಫೋಟಿಸುವ ಬೆದರಿಕೆ ಹಾಕಿದ್ದಾನೆ.
ದೇವನಹಳ್ಳಿ ಪಟ್ಟಣದ ಅಕ್ಕಿಪೇಟೆಯಲ್ಲಿ ವೈ.ವಿ. ಕೃಷ್ಣರಾವ್ ಒಡೆತನದ ವಿಲ್ಲಾ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಕ್ಯೂಬ್ಯಾಟಿಕ್ ಆಸ್ಟರ್ ವಿಲ್ಲಾ ಪ್ರಾಜೆಕ್ಟ್ ಕಾಮಗಾರಿ ಸಾಗಿದೆ.
ಸೆಪ್ಟೆಂಬರ್ 11ರ ಬೆಳಗ್ಗೆ 10 ಗಂಟೆಗೆ ಪ್ರಾಜೆಕ್ಟ್ ಸೂಪರ್ವೈಸರ್ ವೆಂಕಟೇಶ್ ಕಟ್ಟಡ ಕಾಮಗಾರಿಯ ಪರಿಶೀಲನೆಗೆಂದು ಹೋದಾಗ ಪಿಲ್ಲರ್ ಒಂದರಲ್ಲಿ ಸ್ಫೋಟವಾಗಿರುವುದನ್ನು ಗಮನಿಸಿದ್ದರು. ಯಾರೋ ದುಷ್ಕರ್ಮಿಗಳು ಸ್ಫೋಟಕ ಬಳಸಿ ಪಿಲ್ಲರ್ ಸ್ಫೋಟಿಸಿರುವುದಾಗಿ ಗೋಚರಿಸಿತ್ತು. ಸೆಪ್ಟೆಂಬರ್ 12ಕ್ಕೆ ಕಟ್ಟಡ ಮಾಲೀಕರಿಗೆ ಅಪರಿಚತನೊಬ್ಬ ಕರೆ ಮಾಡಿ ಈಗ ಸ್ಫೋಟಿಸಿರುವುದು ಕೇವಲ ಸ್ಯಾಂಪಲ್ ಅಷ್ಟೇ. 50 ಲಕ್ಷ ಹಣ ಕೊಡದಿದ್ದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆವೊಡ್ಡಿದ್ದಾನೆ.
ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೂರ್ವ ವಲಯದ ಹೆಚ್ಚುವರಿ ಆಯುಕ್ತ ಮುರುಗನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಬೆದರಿಕೆ ಕರೆ ಹಿನ್ನೆಲೆ ಕಟ್ಟಡಕ್ಕೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.