ಬೆಂಗಳೂರು: ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪೂರ್ವಭಾವಿ ಸಭೆ ಭಾನುವಾರ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಇಷ್ಟು ದಿನ ಬದ್ಧ ವೈರಿಗಳಾಗಿದ್ದ ಮಾಜಿ ಶಾಸಕರಾದ ಬೈರತಿ ಬಸವರಾಜ್ ಹಾಗೂ ನಂದೀಶ್ ರೆಡ್ಡಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗೆಲುವಿನ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಘಟಾನುಘಟಿ ನಾಯಕರುಗಳು ಹಾಗೂ ಮಾಜಿ ಶಾಸಕ ನಂದೀಶ್ ರೆಡ್ಡಿ, ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿದಿರುವ ಮಾಜಿ ಶಾಸಕ ಹಾಗೂ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿದ್ದು ಮತದಾರರಿಗೆ ಅಚ್ಚರಿ ಮೂಡಿಸಿದೆ. ಕೆ.ಆರ್. ಪುರ ಕ್ಷೇತ್ರದಲ್ಲಿ ನಡೆದ ಬಿಜೆಪಿ ಪಕ್ಷದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಆಹ್ವಾನಿಸುವ ಸಲುವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಇಷ್ಟು ದಿನ ಬದ್ಧ ವೈರಿಗಳಾಗಿದ್ದ ನಂದೀಶ್ ರೆಡ್ಡಿ ಹಾಗೂ ಬೈರತಿ ಬಸವರಾಜ್ ಒಂದಾಗಿರುವುದು ಬಿಜೆಪಿಗೆ ಗೆಲುವಿನ ನಿರೀಕ್ಷೆ ಹೆಚ್ಚಿಸಿದೆ.
ಕಳೆದ ಏಳು ವರ್ಷಗಳ ಕಾಲ ಈ ಇಬ್ಬರು ನಾಯಕರು ಬದ್ಧ ವೈರಿಳಾಗಿದ್ದವರು, ಒಬ್ಬರಿಗೊಬ್ಬರು ಪರಸ್ಪರ ಆರೋಪ, ದೂರು,ಪೊಲೀಸ್ ಠಾಣೆಗಳಲ್ಲಿ ಕೇಸ್ ಗಳನ್ನು ಹಾಕಿದವರು. ಸದ್ಯ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಕ್ಷೇತ್ರದ ಜನತೆಗೆ ಅಚ್ಚರಿ ಮೂಡಿಸಿದೆ. ಬಸವರಾಜ್ ಅವರ ಗೆಲುವಿಗೆ ಬಿಜೆಪಿಯ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದು ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಚಿವ ಆರ್. ಅಶೋಕ್, ಶಾಸಕರಾದ ವಿಶ್ವನಾಥ, ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ, ಪೂರ್ಣಿಮ ಶ್ರೀನಿವಾಸ್ ಸೇರಿದಂತೆ ಘಟಾನುಘಟಿ ನಾಯಕರುಗಳು ಭಾಗವಹಿಸಿದ್ದರು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಟೇಬಲ್ ಹಾಕುವುದಕ್ಕೂ ಕಾರ್ಯಕರ್ತರು ಸಿಗುವುದಿಲ್ಲವೆಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದರು.
ಕೆ ಆರ್ ಪುರ ಕ್ಷೇತ್ರ ಚುನಾವಣಾ ಉಸ್ತುವಾರಿ ಆಗಿರುವ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಕೆ ಆರ್ ಪುರದಲ್ಲಿ ಬಿಜೆಪಿಗೆ ನಂದಿ ಹಾಗೂ ಬಸವ ಜೋಡಿ ಎತ್ತುಗಳು ಒಂದಾಗಿವೆ. ಅವರಿಬ್ಬರು ಬಿಜೆಪಿ ಗೆಲುವಿಗೆ ಶ್ರಮಿಸುತ್ತಾರೆ, ಬಿಜೆಪಿ ಗೆಲುವು ಶತಸಿದ್ಧ ಎಂದು ಭವಿಷ್ಯ ನುಡಿದರು.