ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಉಪ ಚುನಾವಣೆ ಮುಗಿದಿದೆ. ಈಗ ಆರು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಚಿಕ್ಕಬಳ್ಳಾಪುರ,ಹುಣಸೂರು,ಹೊಸಕೋಟೆ,ಶಿರಗುಪ್ಪ ನಗರ ಸಭೆಗಳು, ಸಿಂಧಗಿ ಪುರಸಭೆ, ತೆಕ್ಕಲಕೋಟೆ ಪಟ್ಟಣ ಪಂಚಾಯತ್‌ಗೆ ಚುನಾವಣೆ ನಡೆಯಲಿದೆ. ಚಿಕ್ಕಬಳ್ಳಾಪುರ,ಬೆಂಗಳೂರು ಗ್ರಾಮಾಂತರ, ಮೈಸೂರು,ವಿಜಯಪುರ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಮತದಾನ ಕೇಂದ್ರಗಳನ್ನು ಗುರುತಿಸುವುದರ ಜೊತೆಗೆ ಮತದಾರರ ಪಟ್ಟಿ ಸಿದ್ಧಪಡಿಸುವುದು. ಸಿಬ್ಬಂದಿ ನೇಮಕ, ವಿದ್ಯುನ್ಮಾನ ಮತಯಂತ್ರಗಳ ಸಂಗ್ರಹ ಹಾಗೂ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ, ಚುನಾವಣೆಗೆ ಮಾಡಿಕೊಂಡಿರುವ ಅಗತ್ಯ ಪೂರ್ವ ಸಿದ್ದತೆಗಳ ಬಗ್ಗೆ ಜನವರಿ 11ರೊಳಗೆ ವರದಿ ಸಲ್ಲಿಸಲು ರಾಜ್ಯ ಚುನಾವಣಾ ಆಯೋಗ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ನಗರಸಭೆಗಳಿಗೆ ಉಪವಿಭಾಗಾಧಿಕಾರಿ ಹುದ್ದೆಗೆ ಸರಿಸಮನಾದ ಹುದ್ದೆಯ ಅಧಿಕಾರಿಯನ್ನು ರಿಟರ್ನಿಂಗ್ ಅಧಿಕಾರಿಯಾಗಿ, ಪುರಸಭೆ, ಪಟ್ಟಣ ಪಂಚಾಯತ್‌ಗಳಿಗೆ ತಹಶೀಲ್ದಾರ್ ಅಥವಾ ಸರಿಸಮನಾದ ಅಧಿಕಾರಿ ನೇಮಕ ಮಾಡಿಕೊಳ್ಳುವಂತೆ ನಿರ್ದೇಶಿಸಿದೆ.
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಪರಿಶೀಲನೆಗೆ ಸಾರ್ವಜನಿಕ ಲೆಕ್ಕಪತ್ರ ಇಲಾಖೆ ಅಧಿಕಾರಿಗಳ ತಂಡವನ್ನು ನೇಮಕ ಮಾಡಿಕೊಳ್ಳಬೇಕು. ಚುನಾವಣಾ ಸಾಮಗ್ರಿ, ಗುರುತು ಸೀಲು, ಲೇಖನ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಚುನಾವಣೆಗೆ ಅಗತ್ಯ ವೆಚ್ಚದ ಪ್ರಸ್ತಾವನೆ ಸಲ್ಲಿಸುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಸೂಚಿಸಿದೆ.