ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿಯೊಂದಕ್ಕೆ ರಸ್ತೆ ಬದಿಯಲ್ಲಿ ಅಡ್ಡವಾಗಿ ಹಾಕಿದ್ದ ಕೇಬಲ್ಗಳು ಸಿಕ್ಕಿಹಾಕಿಕೊಂಡ ಪರಿಣಾಮ ರಸ್ತೆ ಬದಿಯ ವಿದ್ಯುತ್ ಕಂಬಗಳು ಸಾಲಾಗಿ ಧರೆಗುರುಳಿದ ಘಟನೆ ನಡೆದಿದೆ.
ಆನೇಕಲ್ನ ಬೇಗೂರು ವಾರ್ಡಿನ ಬಸಾಪುರ ಜನವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಲಾರಿಗೆ ರಸ್ತೆ ಬದಿಯ ವಿದ್ಯತ್ ಕಂಬಗಳ ಮೇಲೆ ಅಡ್ಡವಾಗಿ ಹಾಕಲಾಗಿದ್ದ ಕೇಬಲ್ ಲಾರಿಯ ಹಿಂಬದಿ ಸಿಕ್ಕಿಹಾಕಿಕೊಂಡಿದ್ದು ಚಾಲಕನ ಗಮನಕ್ಕೆ ಬಾರದೆ ವಾಹನದ ವೇಗದಿಂದ ವಿದ್ಯತ್ ತಂತಿಯು ಸಹ ಸಿಕ್ಕಿಹಾಕಿಕೊಂಡು 8 ವಿದ್ಯತ್ ಕಂಬಗಳು ಧರೆಗುರುಳಿವೆ.
ಸಮಯಕ್ಕೆ ಸರಿಯಾಗಿ ವಿದ್ಯತ್ ಸರಬರಾಜು ಸ್ಥಗಿತವಾಗಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಘಟನೆಯಲ್ಲಿ ಎರಡು ಮನೆ ಮೇಲೆ ಕಂಬ ಬಿದ್ದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಸಿಲುಕಿದ ಬೈಕ್ ಸವಾರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸದ್ಯ ಸ್ಥಳೀಯರು ಚಾಲಕನನ್ನು ಹಿಡದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದು, ಮನೆ ಜಖಂಗೊಂಡಿರುವುದಕ್ಕೆ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡಬೇಕು. ಮುಖ್ಯವಾಗಿ ಬೆಸ್ಕಾಂಗೆ ನಷ್ಟ ಪರಿಹಾರವನ್ನು ಕಟ್ಟಿಕೊಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ದಲಿತ ಸಂಘರ್ಷ ಸೇನೆಯ ರಾಜ್ಯಾಧ್ಯಕ್ಷ ಎ.ಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಚಾಲಕನ ಅಜಾಗುರೂಕತೆಯಿಂದ ಘಟನೆ ನಡೆದಿದ್ದು, ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು. ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಬೇಗೂರು ವಾರ್ಡಿನ ಬಿಬಿಎಂಪಿ ಸದಸ್ಯ ಆಂಜಿನಪ್ಪ ಮಾತನಾಡಿ, ಲಾರಿ ಚಾಲಕನ ನಿರ್ಲಕ್ಷ್ಯವನ್ನು ಖಂಡಿಸಿದರು. ಬೆಸ್ಕಾಂ ಮತ್ತು ಆರಕ್ಷಕ ಠಾಣೆಯ ಸಿಬ್ಬಂದಿಗೆ ತುರ್ತು ಪರಿಹಾರ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.