ಬೆಂಗಳೂರು : ರಾಜ್ಯ ಸರ್ಕಾರವು ವಿಧಾನ ಪರಿಷತ್ ಸಚಿವಾಲಯದ ಸಿಬ್ಬಂದಿಗೆ ವಸ್ತ್ರ ಸಂಹಿತೆ (Dress Code) ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಆದೇಶವು ವಿಧಾನ ಪರಿಷತ್ ಸಚಿವಾಲಯದಲ್ಲಿ ಕೆಲಸ ಮಾಡುವ ಡಿ-ದರ್ಜೆ ನೌಕರರಿಗೆ ಅನ್ವಯವಾಗಲಿದೆ.
ಡಿ-ದರ್ಜೆಯ ಪುರುಷ ನೌಕರರಿಗೆ ಬಿಳಿ ಬಣ್ಣದ ಡ್ರೆಸ್, ಮಹಿಳಾ ನೌಕರರಿಗೆ ಮೆರೂನ್ ಡ್ರೆಸ್ ಧರಿಸುವಂತೆ ಸೂಚಿಸಲಾಗಿದೆ. ಇನ್ನು, ಮುಂದೆ ಡಿ-ದರ್ಜೆಯ ನೌಕರರು ಅವರವರಿಗೆ ಸೂಚಿಸಿರುವ ಸಮವಸ್ತ್ರಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಚಿವಾಲಯದ ಕಾರು ಚಾಲಕರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕೆಂದು ತಿಳಿಸಲಾಗಿದೆ.
ವಿಧಾನ ಪರಿಷತ್ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್. ಜಯಂತಿ, ಈ ಸುತ್ತೋಲೆ ಹೊರಡಿಸಿದ್ದಾರೆ. ಪರಿಷತ್ತಿನ ಸಚಿವಾಲಯದಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ನೌಕರರಲ್ಲಿ ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದೂ ತಿಳಿಸಲಾಗಿದೆ.
ಮಾರ್ಚ್ 1ರಿಂದ ಬಯೋಮೆಟ್ರಿಕ್ ಆಧರಿತ ಹಾಜರಾತಿಯನ್ನು ಕಡ್ಡಾಯ ಮಾಡಲಾಗಿದೆ. ಆ ನಂತರ ಮಾರ್ಚ್ 15ರಿಂದ ನೌಕರರು ಹೊಸ ವಸ್ತ್ರ ಸಂಹಿತೆಗೆ ಅನುಗುಣವಾಗಿ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕಿದೆ.
ವಾಹನ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು. ವಿಧಾನಸೌಧದ ಕಾರಿಡಾರುಗಳಲ್ಲಿ ಗುಂಪಾಗಿ ಸೇರುವುದು ಮತ್ತು ಮೊಬೈಲ್‍ನಲ್ಲಿ ಮಾತನಾಡುತ್ತಾ ನಿಲ್ಲುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ನೌಕರರಿಗೆ ಅಧಿಕೃತ ಕೆಲಸಗಳಿಗೆ ಮಾತ್ರ ಕಚೇರಿಯಿಂದ ಹೊರಗಡೆ ಹೋಗಲು ಅನುಮತಿ ನೀಡಬೇಕು ಎಂದು ಸೂಚಿಸಲಾಗಿದೆ.