ಬೆಂಗಳೂರು: ರಾಜ್ಯವೂ ಸೇರಿದಂತೆ ದೇಶದಾದ್ಯಂತ ಲಾಕ್ಡೌನ್ ಏ. 14ಕ್ಕೆ ಮುಕ್ತಾಯವಾಗಲಿದೆಯಾ ಅಥವಾ ಮುಂದುವರಿಯಲಿದೆಯಾ ಎನ್ನುವುದಕ್ಕೆ ಸ್ಪಷ್ಟ ಉತ್ತರ ನಾಳೆ ಸಿಗಲಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ 2 ಸುತ್ತಿನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಆಯಾ ರಾಜ್ಯಗಳ ಸ್ಥಿತಿಗತಿ ಗಮನಿಸಿ ಎಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕೆಂದು ನಾಳೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈಗಾಗಲೇ ದೇಶದ ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಮಾರಿ ವ್ಯಾಪಿಸಿದ್ದು, ಏ. 14ರಿಂದ ಲಾಕ್ಡೌನ್ ಸಡಿಲಿಸಿದರೆ ಯಾವ ರೀತಿ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಇಂದು 2ನೇ ಹಂತದಲ್ಲಿ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಮಾಲೋಚಿಸಿದ್ದು, ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮುನ್ನೆಚ್ಚರಿಕೆಯ ವಿಚಾರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಾರ್ಚ್ 22ರವರೆಗೆ ರಾಜ್ಯಕ್ಕೆ ವಿದೇಶದಿಂದ ನಾಗರಿಕರು ಆಗಮಿಸಿದ್ದು, ಇವರಿಂದಾಗಿ ಕೊರೊನಾ ಮಾರಿ ಸಮುದಾಯವನ್ನು ತಲುಪಿದೆಯಾ ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ. ಇದಾದ ಬಳಿಕವೇ ಲಾಕ್ಡೌನ್ ಮುಂದುವರಿಸುವ ಇಲ್ಲವೇ ಸಡಿಲಗೊಳಿಸುವ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಲಿದೆ.
ರಾಜ್ಯದಲ್ಲಿ ಆತಂಕ ಕಡಿಮೆಯಾಗಿಲ್ಲ: ಹಾಗಂದ ಮಾತ್ರಕ್ಕೆ ಏಪ್ರಿಲ್ 14ರಿಂದ ಲಾಕ್ಡೌನ್ನಿಂದ ರಾಜ್ಯ ನಿರಾಳವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಮೈಸೂರಿನ ನಂಜನಗೂಡು, ತುಮಕೂರು, ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳಾದ ಮಂಗಳೂರು ಹಾಗೂ ಉಡುಪಿ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದ್ದು, ಇಲ್ಲಿ ಲಾಕ್ಡೌನ್ ಸಡಿಲಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಇನ್ನು ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯ ರೋಗಿಗಳು ಇದ್ದು, ಲಾಕ್ಡೌನ್ ಸಡಿಲಿಸಿದರೆ ಅಕ್ಕಪಕ್ಕದ ರಾಜ್ಯಗಳಿಂದ ಸೋಂಕು ರಾಜ್ಯಕ್ಕೆ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಜವಾಬ್ದಾರಿಯೂ ಕರ್ನಾಟಕದ ಮೇಲಿದೆ.
ಗಡಿ ಭಾಗದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ: ಮಹಾರಾಷ್ಟ್ರ ಗಡಿ ಭಾಗವಾದ ಬೆಳಗಾವಿ, ಕಾರವಾರ, ಕೇರಳ ಗಡಿ ಭಾಗವಾದ ಉಡುಪಿ-ಮಂಗಳೂರು, ತಮಿಳುನಾಡು-ಕೇರಳ ಗಡಿ ಭಾಗವಾದ ಮೈಸೂರು ಹಾಗೂ ಚಾಮರಾಜನಗರ, ಆಂಧ್ರ ಪ್ರದೇಶ, ತೆಲಂಗಾಣ ಗಡಿ ಭಾಗವಾದ ಕೋಲಾರ-ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಕಲಬುರಗಿ ಮತ್ತಿತರ ಜಿಲ್ಲೆಗಳಲ್ಲಿ ಎಚ್ಚರ ವಹಿಸುವ ಅನಿವಾರ್ಯತೆ ಹೆಚ್ಚಾಗಿದೆ.
ಇದರಿಂದ ಈ ಭಾಗಗಳಲ್ಲಿ ಲಾಕ್ಡೌನ್ ತರವಿನಿಂದ ಅನಾನುಕೂಲವೇ ಹೆಚ್ಚಾಗಲಿದೆ. ಈ ಹಿನ್ನೆಲೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳು ಹಾಗೂ ಕೊರೊನಾ ಅಷ್ಟಾಗಿ ವ್ಯಾಪಿಸದ ಜಿಲ್ಲೆಗಳಲ್ಲಿ ಲಾಕ್ಡೌನ್ ಕೊಂಚ ಮಟ್ಟಿಗೆ ಸಡಿಲಿಸಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಗೋಚರಿಸುತ್ತಿದೆ.