ಬೆಂಗಳೂರು: ರಾಜ್ಯದಲ್ಲಿ ಕೋವಿಡ್ನಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಗಳು ಹಂತ ಹಂತವಾಗಿ ನಡೆಯುತ್ತಿವೆ. ಜು.10 ರಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದಂತೆ ಅಂತಿಮ ವರ್ಷದ (ಸೆಮಿಸ್ಟರ್) ಪದವಿ ಪರೀಕ್ಷೆಗಳ ಜೊತೆಗೆ ಬ್ಯಾಕ್‌ಲಾಗ್ ವಿಷಯಗಳ ಪರೀಕ್ಷೆಗಳನ್ನು ನಡೆಸುವಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಆದೇಶಿಸಲಾಗಿತ್ತು.
ಆದರೆ, ಕೆಲವು ವಿಶ್ವ ವಿದ್ಯಾಲಯಗಳು ಬಾಕಿ ಉಳಿಸಿಕೊಂಡಿರುವ ಅನುತ್ತೀರ್ಣರಾಗಿರುವ (ಬ್ಯಾಕ್ ಲಾಗ್) ಹಿಂದಿನ ಸೆಮಿಸ್ಟರ್‌ಗಳ ವಿಷಯಗಳ ಪರೀಕ್ಷೆ ನಡೆಸದಿರಲು ತೀರ್ಮಾನಿಸಿವೆ. ಈ ಸಂಗತಿ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ, ಅಂತಿಮ ವರ್ಷದ ವಿದ್ಯಾರ್ಥಿಗಳು ಪದವಿ ಪೂರೈಸಿಕೊಂಡು ಉನ್ನತ ವಿದ್ಯಾಭ್ಯಾಸ ಅಥವಾ ಉದ್ಯೋಗ ಪಡೆಯುವ ಹಿನ್ನೆಲೆಯಲ್ಲಿ ಅಂತಿಮ ವರ್ಷದ (ಸೆಮಿಸ್ಟರ್) ಪದವಿ ಪರೀಕ್ಷೆಗಳ ಜೊತೆಗೆ ಬ್ಯಾಕ್‌ಲಾಗ್ ವಿಷಯಗಳ ಪರೀಕ್ಷೆಗಳನ್ನು ನಡೆಸುವಂತೆ ಎಲ್ಲಾ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯು ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸುತ್ತೋಲೆ ಹೊರಡಿಸಿದೆ.