ಬೆಂಗಳೂರು: ಆರ್ಥಿಕ ಇಲಾಖೆಯಿಂದ ಹುದ್ದೆ ಭರ್ತಿಗೆ ಒಪ್ಪಿಗೆ ಸಿಗುತ್ತಿದ್ದಂತೆಯೇ ಆದಷ್ಟು ಶೀಘ್ರ ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಲಾಗುವುದು ಎಂದು ಕೃಷಿ ಸಚಿವ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಯಲಬುರ್ಗ ಶಾಸಕ ಹಾಲಪ್ಪ ಆಚಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ.ಪಾಟೀಲ್, ಕೋವಿಡ್ ಆರ್ಥಿಕ ಸಂಕಷ್ಟದಿಂದ ಯಾವುದೇ ಹೊಸ ಹುದ್ದೆ ತುಂಬಲು ಸದ್ಯಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡುತ್ತಿಲ್ಲ. ಹುದ್ದೆ ತುಂಬಲು ಸರ್ಕಾರದಿಂದ ಒಪ್ಪಿಗೆ ಸಿಕ್ಕ ಬಳಿಕ ಶೀಘ್ರವೇ ಖಾಲಿ ಸ್ಥಾನಗಳನ್ನು ತುಂಬಲಾಗುವುದು ಎಂದರು.
ಈ ಹುದ್ದೆಗಳೆಲ್ಲ ಇತ್ತೀಚೆಗೆ ಖಾಲಿಯಾಗಿದ್ದಲ್ಲ. ಬಹಳ ಹಿಂದಿನಿಂದಲೇ ಭರ್ತಿಯಾಗದೇ ಉಳಿದಿದ್ದವು. ಕೊಪ್ಪಳ ಜಿಲ್ಲೆಯ ಕೃಷಿ ಇಲಾಖೆಯಲ್ಲಿನ ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಲ್ಲಿ ಒಟ್ಟು 246 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 141 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 105 ಹುದ್ದೆಗಳು ಖಾಲಿಯಿವೆ. ಶೀಘ್ರದಲ್ಲಿಯೇ ಇವುಗಳನ್ನು ಸಹ ಸರ್ಕಾರದಿಂದ ಅನುಮೋದನೆ ಸಿಗುತ್ತಿದ್ದಂತೆಯೇ ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು 45 ಸಾವಿರ ಮನೆ ನಿರ್ಮಾಣ : ಸಚಿವ ಸೋಮಣ್ಣ
2018-19 ಸಾಲಿನಲ್ಲಿ ರಾಜ್ಯದಲ್ಲಿ ಗ್ರೂಪ್-ಎ ಮತ್ತು ಬಿ ವೃಂದದಲ್ಲಿ ಸಹಾಯಕ ಕೃಷಿ ನಿರ್ದೇಶಕರು 66 ಹುದ್ದೆ, ಕೃಷಿ ಅಧಿಕಾರಿಗಳು 350 ಹುದ್ದೆ, ಸಹಾಯಕ ಕೃಷಿ ಅಧಿಕಾರಿಗಳು 157 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗಿದೆ. ಗ್ರೂಪ್-ಸಿ ವೃಂದದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಹಾಗೂ ಮುಂಬಡ್ತಿ ಕೋಟಾದಡಿ ಖಾಲಿ ಇರುವ ಹುದ್ದೆಗಳನ್ನು ನಿಯಮಾನುಸಾರ ಬಡ್ತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಕೃಷಿ ಚಟುವಟಿಕೆಗಳನ್ನು ಸಮರ್ಪಕವಾಗಿ ಸಕಾಲದಲ್ಲಿ ನಿರ್ವಹಿಸಲು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಸಲುವಾಗಿ ಕೊಪ್ಪಳ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 70 ಸಿಬ್ಬಂದಿಯನ್ನು ಇಲಾಖಾ ಮಾರ್ಗಸೂಚಿಯನ್ವಯ ನೇಮಕ ಮಾಡಿಕೊಳ್ಳಲಾಗಿದೆ. ಖಾಲಿ ಹುದ್ದೆಗಳಿಗೆ ಎದುರಾಗಿ ಹಾಗೂ ಆತ್ಮ ಯೋಜನೆಯಡಿ ಹೊರಗುತ್ತಿಗೆ ಹುದ್ದೆಗಳನ್ನು ತುಂಬಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ:ಜಾತಿ ಒಡೆಯುವುದು, ಅನಗತ್ಯ ಓಲೈಕೆಯೇ ಸಿದ್ದರಾಮಯ್ಯನವರ ಜಾತ್ಯತೀತತೆ: ಹೆಚ್ಡಿಕೆ ತಿರುಗೇಟು
ರೈತರು ಬೆಳೆ ವಿಮೆಗೆ ಆಧಾರ್ ಲಿಂಕ್ ಸೇರಿದಂತೆ ಮತ್ತಿತರ ಕೃಷಿಗೆ ಸಂಬಂಧಿಸಿದಂತೆ ತಮಗೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಸ್ಥಳೀಯ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿ ಸಚಿವರು ತಿಳಿಸಿದರು.