ಬೆಂಗಳೂರು: ರಾಜ್ಯ ಪೌರ ನೌಕರರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಲಾಗುವುದು. ನೌಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು 17 ಬೇಡಿಕೆಗಳನ್ನು ಇಟ್ಟಿದ್ದಾರೆ. ಸಿಎಂ ಜೊತೆಗೂ ಇದರ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆಯಾಗಿದೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪೌರ ನೌಕರರ ಸಂಘಟನೆಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ದಿನಗೂಲಿ ನೌಕರರನ್ನ ಕಾಯಂಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಆರೋಗ್ಯ ಯೋಜನೆ ವಿಸ್ತರಣೆ ಮಾಡುವುದು, ಗುಂಪು ಮನೆಗಳು ಬೇಡ, ನಗರಸಭೆ ವ್ಯಾಪ್ತಿಯಲ್ಲಿ ಮನೆಗಳನ್ನು ಕೊಡಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದರು.
ನಗರಸಭೆಯ ಐದು ಕಿಲೋ ಮೀಟರ್ ದೂರದಲ್ಲಿ ಮನೆಗಳನ್ನ ಕೊಡಲು ಅವಕಾಶ ಇದೆಯಾ ಎಂಬುದನ್ನ ಚರ್ಚೆ ಮಾಡಬೇಕು. ಸಿಎಂ ಜೊತೆಗೆ ಪ್ರಮುಖವಾಗಿ ಯಾವ ಯಾವ ಬೇಡಿಕೆ ಈಡೇರಿಸಬೇಕು ಎನ್ನುವ ಬಗ್ಗೆ ಚರ್ಚೆ ಮಾಡುತ್ತೇನೆ. ಅವರು 15 ದಿನಗಳ ಗಡುವು ಕೇಳುತ್ತಿದ್ದಾರೆ. ನಾನೇ ಮುಖ್ಯಮಂತ್ರಿಯಾಗಿದ್ರೆ, ಗಡುವು ಕೊಡಬಹುದಿತ್ತು. ನಾನು ಪೌರಡಳಿತ ಇಲಾಖೆಯ ಸಚಿವ ಅಷ್ಟೇ. ಆದಷ್ಟು ಬೇಗ ಬೇಡಿಕೆಯನ್ನ ಈಡೇರಿಸುತ್ತೇವೆ ಎಂದು ತಿಳಿಸಿದರು.
ಪೌರ ಕಾರ್ಮಿಕರ ನೇರ ನೇಮಕಕ್ಕೆ ಸರ್ಕಾರ ಒಪ್ಪಿದ ಬೆನ್ನಲ್ಲೇ ಪೌರ ನೌಕರರು ಸೇವೆ ಕಾಯಂಗೊಳಿಸುವ ಬೇಡಿಕೆ ಮಂಡಿಸಿದ್ದು, ಈ ಸಂಬಂಧ ವಿಧಾನಸೌಧದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಸಮಕ್ಷಮ ಇಲಾಖೆ ಕಾರ್ಯದರ್ಶಿ ಹಾಗೂ ರಾಜ್ಯ ಪೌರ ನೌಕರರ ಸಂಘದ ಪದಾಧಿಕಾರಿಗಳ ಜತೆಗೆ ಸಭೆ ನಡೆಸಿದರು.
ಜನೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ಮೂರು ವರ್ಷದ ರಾಜ್ಯ, ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಲು ಜನೋತ್ಸವ ಮಾಡಬೇಕಂತ ಸಿದ್ಧತೆ ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಜನೋತ್ಸವದ ಮೂಲಕ ಅಭಿವೃದ್ಧಿಯನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ: ಜನರಿಗೆ ಸಿಗಲಿದೆಯಾ ಬಂಪರ್ ಕೊಡುಗೆ!?
ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಸಾಧನೆ ಏನು ಮಾಡಿದ್ದೇವೆ ಅನ್ನೋದು ಜನರ ಮುಂದೆ ಇಡುತ್ತೇವೆ. ಸರ್ಕಾರ ಕೊಟ್ಟಿರುವ ಸವಲತ್ತುಗಳು ಜಾರಿಯಾಗಿವೆ. ಎಲ್ಲಾ ಸರ್ಕಾರಗಳು ಇದ್ದಾಗ ಡಿಸೇಲ್ ಪೆಟ್ರೊಲ್ ಬೆಲೆ ಹೆಚ್ಚಾಗಿದೆ. ಕೆಲವು ಬೆಲೆ ನಿಯಂತ್ರಣ ಆಗಿದೆ, ಕೆಲವು ಹೆಚ್ಚಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಿಎಂ ಸೇರಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಅಲ್ಲೇ ಘೋಷಣೆ ಮಾಡ್ತಾರೆ ಎಂದು ಸಚೊವ ಎಂಟಿಬಿ ನಾಗರಾಜ್ ಹೇಳಿದರು.