ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊಬೈಲ್ ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿದ್ದರೂ, ಖದೀಮರ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಯುವತಿಯ ಮೊಬೈಲ್ ಕದ್ದಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಟೋನಿ ಬಂಧಿತ ಆರೋಪಿ. ಕಳೆದ ತಿಂಗಳು ಸಿದ್ದಾಪುರ ಬಳಿ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಯುವತಿ ಮೊಬೈಲ್ಅನ್ನು ಟೋನಿ ಎಂಬ ಯುವಕ ಕದ್ದು ಪರಾರಿಯಾಗುತ್ತಿದ್ದ. ಈ ವೇಳೆ ಅಲ್ಲೇ ಇದ್ದ ಡೆಲಿವರಿ ಬಾಯ್ ಸೂರ್ಯ ಎಂಬುವರು ಯುವತಿ ಸಹಾಯಕ್ಕೆ ಬಂದು find my ಆ್ಯಪ್ ಮುಖಾಂತರ ಮೊಬೈಲ್ ಲೋಕೆಷನ್ ಪತ್ತೆ ಮಾಡಿದ್ದಾರೆ.
ಬಳಿಕ ಯುವತಿಗೆ ತನ್ನ ಸ್ನೇಹಿತನ ಮೊಬೈಲ್ ನೀಡಿ ನಂಬರ್ ಎಂಟ್ರಿ ಮಾಡುವಂತೆ ಹೇಳಿದ್ದಾರೆ. ಡೆಲಿವರಿ ಬಾಯ್ ಸೂರ್ಯ ಮೊಬೈಲ್ ಕಿತ್ತು ಎಸ್ಕೇಪ್ ಆಗಿ, ಐದಾರು ಕಿಲೋಮೀಟರ್ ದೂರದಲ್ಲಿದ್ದ ಆರೋಪಿಯನ್ನು ಹಿಂಬಾಲಿಸಿದ್ದಾರೆ. ಕಳ್ಳನನ್ನು ಪತ್ತೆಹಚ್ಚಿ ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದಾರೆ. ಆದ್ರೆ ಇದಕ್ಕೆ ಆತ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಸೂರ್ಯ ಅವರ ಮುಖಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ನೆಲಮಂಗಲ: ಅಂಗಡಿ ಶಟರ್ ಮುರಿದು ಕಳ್ಳತನ, ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ
ಹಲ್ಲೆ ಬಳಿಕ ಡೆಲಿವರಿ ಬಾಯ್ ಸೂರ್ಯಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಮೊಬೈಲ್ ಕಳೆದುಕೊಂಡ ಯುವತಿ ಮೊಬೈಲ್ ಕಳ್ಳತನ ಬಗ್ಗೆ ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಸಿದ್ದಾಪುರ ಠಾಣೆ ಇನ್ಸ್ಪೆಕ್ಟರ್ ಹನುಮಂತ ಭಜಂತ್ರಿ ಅಂಡ್ ಟೀಂ ಆರೋಪಿ ಪತ್ತೆಗಾಗಿ ರಸ್ತೆಯುದ್ದಕ್ಕೂ ಇರುವ ಸಿಸಿಟಿವಿ ಪರಿಶೀಲಿಸಿ ಆರೋಪಿ ಟೋನಿಯನ್ನು ಹೆಡೆಮುರಿ ಕಟ್ಟಿದ್ದಾರೆ.