ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಬಿಗಡಾಯಿಸಿದ ಬಿಜೆಪಿ ಒಳಗೊಳಗಿನ ಅಸಮಾಧಾನ ಸಚಿವರಿಗೆ ಖಾತೆಗಳ ಹಂಚಿಕೆಯ ನಂತರ ಮತ್ತಷ್ಟು ತೀವ್ರ ಸ್ವರೂಪ ಪಡೆದರೂ ಇದ್ದಕ್ಕಿದ್ದಂತೆ ಪರಿಸ್ಥಿತಿ ತಿಳಿಗೊಳ್ತಿದೆ.
ಸಚಿವ ಸಂಪುಟ ವಿಸ್ತರಣೆಯ ನಂತರ ಹಲವು ಮಂದಿ ಕೆರಳಿ ಕೆಂಡವಾಗಿದ್ದರಲ್ಲದೇ ತಮ್ಮ ನೋವನ್ನು ಬಹಿರಂಗವಾಗಿ ತೋರ್ಪಡಿಸಿಕೊಂಡಿದ್ದರು. ಮೂರು ಮಂದಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದು ಹಾಗೂ ಖಾತೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಭಿನ್ನಮತೀಯರ ಸಂಖ್ಯೆ ಮತ್ತಷ್ಟು ಹೆಚ್ಚಾದರೂ ಕಾಲಕ್ರಮೇಣ ಪರಿಸ್ಥಿತಿ ಸುಧಾರಿಸುತ್ತಿದೆ. ಹಿರಿಯ ನಾಯಕರಾದ ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಸೇರಿದಂತೆ ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಮಂದಿ ವರಿಷ್ಠರ ವಿರುದ್ಧ ಸಿಡಿದು ಬಿದ್ದಾಗ ಸರ್ಕಾರದ ಭವಿಷ್ಯ ಡೋಲಾಯಮಾನವಾಗುವ ಲಕ್ಷಣಗಳು ಕಂಡು ಬಂದಿದ್ದವು.
ಅಶೋಕ್ ಮನವೊಲಿಕೆ ಕಸರತ್ತು
ಡಿಸಿಎಂ ಹುದ್ದೆ ತಪ್ಪಿತು ಎಂದು ಅಶೋಕ್ ಅಸಮಾಧಾನಗೊಂಡಿದ್ದಲ್ಲದೆ ಕಳೆದ ಎರಡು ದಿನಗಳಿಂದ ವಿಧಾನಸೌಧದ ಕಡೆ ಸುಳಿಯಲೂ ಇಲ್ಲ. ಬೆಳಗ್ಗೆ ಜಯನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಿಎಂ ಯಡಿಯೂರಪ್ಪನವರು ಕಾರ್ಯಕ್ರಮ ಮುಗಿಸಿ ಅಶೋಕ್ ಅವರನ್ನು ತಮ್ಮ ಕಾರಿನಲ್ಲೇ ಕೂರಿಸಿಕೊಂಡು ತೆರಳಿದ್ದಾರೆ. ಕಾರ್ಯಕ್ರಮ ಮುಗಿಯುವವರೆಗೂ ಒಬ್ಬರಿಗೊಬ್ಬರು ಮಾತನಾಡಲೇ ಇಲ್ಲ. ಅಶೋಕ್ ಅವರನ್ನು ಕಾರಿನಲ್ಲಿ ಕರೆದೊಯ್ದ ಬಿಎಸ್ವೈ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೂ, ಸಮಾಧಾನಗೊಳ್ಳದ ಅಶೋಕ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಅಶೋಕ್ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಅವರಿಗೆ ಕಂದಾಯ ಖಾತೆ ನೀಡಲಾಗಿದೆ. ಆದರೆ, ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿತ್ತಾದರೂ ಇಂದು ಖುದ್ದು ಈಶ್ವರಪ್ಪ ಅವರೇ ಸಂಕಷ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಸಮಾಧಾನದಿಂದಿರಬೇಕು ಎನ್ನುವ ಮೂಲಕ ಬಿಳಿ ಬಾವುಟ ಹಾರಿಸಿದರು. ಇದೇ ರೀತಿ ಪ್ರವಾಸೋದ್ಯಮ ಖಾತೆ ನೀಡಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಸಿ.ಟಿ.ರವಿ ಇಂದು ಯೂಟರ್ನ್ ಹೊಡೆದಿದ್ದಲ್ಲದೆ ತಮಗೆ ಪಕ್ಷ ತಾಯಿ ಸಮಾನ. ಹೀಗಾಗಿ ಪಕ್ಷ ಏನು ಹೇಳುತ್ತದೆಯೋ ಆ ಕೆಲಸ ಮಾಡುತ್ತೇನೆ. ಹೀಗಾಗಿ ನಾನು ಅಸಮಾಧಾನಗೊಂಡಿದ್ದೇನೆ ಎಂಬುದು ಸುಳ್ಳು ಎಂದಿದ್ದಾರೆ.
ಶೆಟ್ಟರ್ ಮುನಿಸೇಕೆ?
ಈ ಮಧ್ಯೆ ಮಾಜಿ ಮುಖ್ಯಮಂತ್ರಿ, ಹಾಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಅಸಮಾಧಾನಗೊಂಡಿದ್ದರೂ ಬಹಿರಂಗವಾಗಿ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿಲ್ಲ. ಬದಲಿಗೆ ಪಕ್ಷ ನೀಡಿದ ನಿರ್ದೇಶನದಂತೆ ನಡೆದುಕೊಳ್ಳಲು ತೀರ್ಮಾನಿಸಿರುವ ಅವರು, ಇಂದು ಬೆಳಿಗ್ಗೆ ವಿಧಾನಸೌಧಕ್ಕೆ ಭೇಟಿ ನೀಡಿ ಕಚೇರಿಗೆ ಪೂಜೆ ಸಲ್ಲಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ.
ಉನ್ನತ ಮೂಲಗಳ ಪ್ರಕಾರ, ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ ಸೇರಿದಂತೆ ಬಂಡಾಯವೆದ್ದ ಬಹುತೇಕ ಶಾಸಕರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಮಾಧಾನಿಸಿದ್ದಾರೆ. ಹಾಗೆಯೇ ಯಡಿಯೂರಪ್ಪ ಆಪ್ತ ಶಾಸಕರೂ ಪರಿಸ್ಥಿತಿ ವಿಕೋಪಕ್ಕೆ ಹೋಗಬಾರದು ಎಂಬ ಕಾರಣಕ್ಕಾಗಿ ಮೌನಕ್ಕೆ ಜಾರಿದ್ದು, ಪರಿಸ್ಥಿತಿಯನ್ನು ಕಾದು ನೋಡಲು ತೀರ್ಮಾನಿಸಿದ್ದಾರೆ. ಹೀಗೆ ಭಿನ್ನಮತದ ಜ್ವಾಲೆ ಕಡಿಮೆಯಾಗ್ತಿದ್ದಂತೆ ನೂತನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನಸೌಧಕ್ಕೆ ಬಂದು ಕಾರ್ಯಾರಂಭಿಸಿದ್ದಾರೆ.
ಹಲವರ ಅತೃಪ್ತಿಗೆ ಕಾರಣರಾದ ಲಕ್ಷಣ ಸವದಿ ಕೂಡಾ ನಾಳೆ ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದಿದ್ದು, ಚರ್ಚೆಯ ನಂತರ ಮುಂದಿನ ಹೆಜ್ಜೆಯಿಡಲು ತೀರ್ಮಾನಿಸಿದ್ದಾರೆ. ಹಾಗೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ವಿಧಾನಸೌಧಕ್ಕೆ ಭೇಟಿ ನೀಡಿ ಇಲಾಖಾಧಿಕಾರಿಗಳೊಂದಿಗೆ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಹೀಗೆ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಭುಗಿಲೆದ್ದ ಭಿನ್ನಮತದ ಬೇಗೆ ಕ್ರಮೇಣ ತಹಬದಿಗೆ ಬರುತ್ತಿದ್ದು, ಆಡಳಿತ ಯಂತ್ರ ಮೈ ಕೊಡವಿ ಮೇಲೇಳಲು ಸಜ್ಜಾದಂತೆ ಭಾಸವಾಗತೊಡಗಿದೆ.