ಬೆಂಗಳೂರು: ನ್ಯಾಯಾಲಯವು ಸಂವಿಧಾನದ ಅನುಸಾರದಲ್ಲಿ ನಡೆಯುತ್ತಿದ್ದು, ಜಾತ್ಯತೀತವಾಗಿದೆ. ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಬೀದರ್ನ ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಅವರು ಸಂಗಮೇಶ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಹನುಮಂತಪ್ಪ ಹರವಿ, ದೇವಸ್ಥಾನಕ್ಕೆ ರಸ್ತೆಯ ಸಮಸ್ಯೆಯಾಗಿದೆ. ಪ್ರತಿವಾದಿಗಳಿಗೆ ರಸ್ತೆ ನಿರ್ಮಿಸಲು ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು, ದೇವಸ್ಥಾನವನ್ನು ಎಲ್ಲಿ ನಿರ್ಮಿಸಲಾಗಿದೆ? ಸರ್ಕಾರದ ಆಸ್ತಿಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆಯೇ? ಸರ್ಕಾರಿ ಜಾಗದಲ್ಲಿ ದೇವಸ್ಥಾನ ಹೇಗೆ ನಿರ್ಮಿಸಲಾಗಿದೆ? ಎಂಬುದನ್ನು ತಿಳಿಸಿ. ಸರ್ಕಾರದ ಆಸ್ತಿಯಲ್ಲಿ ದೇವಸ್ಥಾನ ನಿರ್ಮಿಸಿರುವುದನ್ನು ತೆರವು ಮಾಡಲು ಹೇಳಿ. ಪ್ರಮಾದವೆಸಗಿ ಅದನ್ನು ಕಾನೂನಾತ್ಮಕಗೊಳಿಸಲು ನಾವು ಅನುಮತಿಸುವುದಿಲ್ಲ ಎಂದು ತಿಳಿಸಿದರು. ಅಲ್ಲದೆ, ನಾವು ಯಾವುದೇ ಧರ್ಮದ ವಿರುದ್ಧವಿಲ್ಲ. ಆ ಭಾವನೆಯನ್ನು ಬಿಡಿ. ನ್ಯಾಯಾಲಯವು ಸಂವಿಧಾನದ ಅನುಸಾರ ನಡೆಯುತ್ತಿದೆ. ಜಾತ್ಯಾತೀತವಾಗಿದೆ. ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ ಎಂದು ತಿಳಿಸಿದರು.
ಸರ್ಕಾರದ ಭೂಮಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ರಸ್ತೆ ನಿರ್ಮಿಸಿಕೊಡುವ ಮೂಲಕ ನ್ಯಾಯಾಲಯ ಉಡುಗೊರೆ ನೀಡಬೇಕೆ? ಹಾಗೆ ಮಾಡಿದಲ್ಲಿ ತಪ್ಪು ಎಸಗಿದಂತಾಗಲಿದೆ. ದೇವರ ಅನುಗ್ರಹದಿಂದ ನಾವು ಅದನ್ನು ಮಾಡುವುದಿಲ್ಲ ಎಂದು ಪೀಠ ತಿಳಿಸಿತು.
ಈ ವೇಳೆ ಮಧ್ಯಪ್ರಬೇಶಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಜೊರಾಸ್ಟ್ರಿಯನ್ ಒಬ್ಬರು ತಮ್ಮ ಮಂದಿರಕ್ಕೆ ರಸ್ತೆ ನಿರ್ಮಿಬೇಕು ಎನ್ನಬಹುದು, ಇನ್ನೊಂದು ದಿನ ಮಸೀದಿ ನಿರ್ಮಿಸಲಾಗಿದೆ ರಸ್ತೆ ನಿರ್ಮಿಸಿಕೊಡಿ ಎಂದು ಮತ್ತೊಬ್ಬರು ಕೇಳಬಹುದು. ಇದು ಹಲವು ಧರ್ಮಗಳ ದೇಶ. ಹಲವು ಮಂದಿರಗಳಿವೆ. ಹಾಗೆಂದು ಸರ್ಕಾರ ತನ್ನ ಬಜೆಟ್ ಎಲ್ಲವನ್ನೂ ಮಂದಿರಗಳಿಗೆ ರಸ್ತೆ ನಿರ್ಮಿಸಲು ಬಳಸಬೇಕು. ಹೀಗಾದರೆ ಸರ್ಕಾರ ಯಾವ ಥರದ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತದೆ ? ಎಂದರು.
ಅಕ್ರಮವಾಗಿ ಮಾಡಿರುವುದಕ್ಕೆ ಕಾನೂನಿನ ಮೊಹರು ಒತ್ತಲು ಬಯಸುತ್ತಿದ್ದೀರಿ. ನಾವು ಅದನ್ನು ಮಾಡುವುದಿಲ್ಲ. ಇದು ಸರ್ಕಾರದ ಭೂಮಿ ಎಂದು ತೋರಿಸಿ. ಅದನ್ನು ಅಕ್ರಮವಾಗಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗುವುದು. ಅಕ್ರಮವಾಗಿ ವಶಪಡಿಸಿಕೊಂಡಿರುವುದಕ್ಕೆ ನಾವು ರಸ್ತೆ ನಿರ್ಮಿಸುವಂತೆ ಹೇಳುವುದಿಲ್ಲ ಎಂದ ಪೀಠವು ಅರ್ಜಿ ಹಿಂಪಡೆಯಲು ಅನುಮತಿ ನೀಡಿತು.
ಇದನ್ನೂ ಓದಿ: ದೇವರಾಯನದುರ್ಗದ ಮೀಸಲು ಅರಣ್ಯದಲ್ಲಿ ಒತ್ತುವರಿ ಪ್ರಕರಣ: ಸರ್ಕಾರಕ್ಕೆ ನೋಟಿಸ್ ಜಾರಿ