ಬೆಂಗಳೂರು: ಸುಂದರವಾಗಿರುವುದರಿಂದ ಅನ್ಯ ಪುರುಷರನ್ನ ಆಕರ್ಷಿಸುತ್ತಾಳೆ ಎಂದು ಭಾವಿಸಿ ಪತ್ನಿಯ ಮೇಲೆ ಪತಿ ಆ್ಯಸಿಡ್ ದಾಳಿ ನಡೆಸಿದ್ದ. ಪರಿಣಾಮ ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪಿಗೆ ಕಠಿಣ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
2017ರ ಜುಲೈ 14ರಂದು ಕೆಂಪೇಗೌಡನಗರದ ಸನ್ಯಾಸಿಪಾಳ್ಯದ ಮನೆಯಲ್ಲಿ ಮಂಜುಳಾ ಎಂಬಾಕೆಯ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಪತ್ನಿಯ ಸೌಂದರ್ಯವೇ ತಮ್ಮ ವೈವಾಹಿಕ ಜೀವನಕ್ಕೆ ಮುಳುವಾಗುತ್ತಿದೆ ಎಂದು ಭಾವಿಸಿದ್ದ ಆಕೆಯ ಪತಿ ಚೆನ್ನೇಗೌಡ ನಿತ್ಯ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳವನ್ನು ಸಹಿಸಲಾಗದೆ, ಘಟನೆಗೆ ನಾಲ್ಕು ದಿನಗಳ ಮೊದಲು ಮಂಜುಳಾ ತನ್ನ ಕೆಲಸವನ್ನು ಸಹ ತೊರೆದಿದ್ದರು.
ಆದರೆ, 2017ರ ಜುಲೈ 14ರಂದು ಆರೋಪಿ ತನ್ನ ಪತ್ನಿಯ ಮೇಲೆ ಆ್ಯಸಿಡ್ ಎರಚಿದ್ದ. ಆ್ಯಸಿಡ್ ದಾಳಿಯಿಂದಾಗಿ ಮಂಜುಳಾ ಕೈ, ಕಾಲು, ಮುಖ ಹಾಗೂ ಹೊಟ್ಟೆ ಭಾಗ ಸುಟ್ಟು ಹೋಗಿದ್ದು, ಚಿಕಿತ್ಸೆ ಫಲಿಸದೇ ಸಂತ್ರಸ್ತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಐದು ದಿನಗಳ ಬಳಿಕ ಬಂಧಿಸಲಾಗಿತ್ತು. ಪ್ರಕರಣದ ವಾದ - ಪ್ರತಿವಾದ ಆಲಿಸಿದ 46ನೇ ಸಿಸಿಹೆಚ್ ನ್ಯಾಯಾಲಯ ಬುಧವಾರ ಆರೋಪಿ ಚೆನ್ನೇಗೌಡನನ್ನ ದೋಷಿ ಎಂದು ತೀರ್ಪು ನೀಡಿದೆ.
ಓದಿ: ಮಾಲೀಕರ ಮನೆಯಲ್ಲೇ ದರೋಡೆ; 8 ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಅರೆಸ್ಟ್