ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ನಡೆಸಲೇಬೇಕೆಂದು ಆಗ್ರಹಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಇದೀಗ ಮೌನ ವಹಿಸಿದ್ದು, ಚುನಾವಣೆ ನಿಟ್ಟಿನಲ್ಲಿ ಯಾವುದೇ ಸಿದ್ಧತೆಗೆ ಮುಂದಾಗದೆ ಇರುವುದು ಹಲವು ಪ್ರಶ್ನೆಗಳಿಗೆ ಆಹ್ವಾನ ಕೊಟ್ಟಂತಾಗಿದೆ.
ರಾಜ್ಯದಲ್ಲಿ ಡಿ. 22 ಮತ್ತು 27ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಆದರೆ ಕಾಂಗ್ರೆಸ್ ಯಾವುದೇ ಸಿದ್ಧತೆ ನಡೆಸುತ್ತಿಲ್ಲ. ಈ ಹಿನ್ನೆಲೆ, ಕೇವಲ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು, ಸಭೆ ಸೇರಿ ಚರ್ಚಿಸುವುದು, ಆಂತರಿಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವುದರಲ್ಲೇ ಕೈ ನಾಯಕರು ಬ್ಯುಸಿ ಆಗಿದ್ದಾರಾ ಎಂಬ ಅನುಮಾನ ಕಾಡಲಾರಂಭಿಸಿದೆ.
ಅವಧಿ ಮುಗಿದಿರುವ 5,761 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಬೇಕಿದೆ. ಎರಡು ಹಂತದಲ್ಲಿ ನಡೆಯುವ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ ಕೈಗೊಂಡಿದ್ದು, ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಿದೆ. ಈ ಚುನಾವಣೆಯಲ್ಲಿ ಅಧಿಕೃತವಾಗಿ ರಾಜಕೀಯ ಪಕ್ಷಗಳ ಚಿಹ್ನೆ ಮೇಲೆ ಚುನಾವಣೆ ಎದುರಿಸುವುದಿಲ್ಲ. ಆದರೂ ದೊಡ್ಡ ಮಟ್ಟದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ, ರಾಜಕೀಯ ಚದುರಂಗದಾಟ ನಡೆಯುತ್ತದೆ. ರಾಷ್ಟ್ರೀಯ ಪಕ್ಷಗಳೆರಡೂ ಪೈಪೋಟಿಗೆ ಇಳಿದು ಚುನಾವಣೆ ಎದುರಿಸುತ್ತವೆ. ಆದರೆ ಈ ಬಾರಿ ಅದೇಕೋ ಚುನಾವಣೆ ನಡೆಸುವಂತೆ ಒತ್ತಡ ಹೇರುವಾಗ ಕಾಂಗ್ರೆಸ್ಗೆ ಇದ್ದ ಉತ್ಸಾಹ, ಆಸಕ್ತಿ ಹಾಗು ಧಾವಂತ ಈಗ ಕಾಣಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಕುಳಿತು ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಗೆಲ್ಲಲೇಬೇಕೆಂಬ ತಂತ್ರಗಾರಿಕೆ ಹೆಣೆಯುವಲ್ಲಿ ತೊಡಗಿದ್ದು, ಗ್ರಾಮ ಪಂಚಾಯತ್ ಎಲೆಕ್ಷನ್ ಅನ್ನು ನಿರ್ಲಕ್ಷಿಸಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ತಾನು ಕಳೆದುಕೊಂಡ ವಿಧಾನಸಭೆ ಕ್ಷೇತ್ರಗಳನ್ನು ಮರಳಿ ಪಡೆಯುವ ಯತ್ನದಲ್ಲಿ ಗ್ರಾಮ ಸಮರವನ್ನು ಕಡೆಗಣಿಸಿವೆಯಾ ಎನ್ನುವ ಅನುಮಾನ ಮೂಡುತ್ತಿದೆ.
ಇದನ್ನು ಓದಿ: ಭಾರತೀಯ ಜನತಾ ಪಾರ್ಟಿ ಒಂದು ಕುಟುಂಬವಿದ್ದಂತೆ : ಡಿಸಿಎಂ ಲಕ್ಷ್ಮಣ ಸವದಿ
ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ನಂತರ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗ್ರಾ.ಪಂ ಚುನಾವಣೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಕೋರ್ಟ್ ಮೆಟ್ಟಿಲೇರಿತ್ತು, ಅದರಂತೆ ಇದೀಗ ಚುನಾವಣೆ ಘೋಷಣೆ ಆಗಿದೆ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಆಸೆ, ಆಡಳಿತಾಧಿಕಾರಿಗಳ ನೇಮಕ ಸರಿಯಲ್ಲ. ಸರ್ಕಾರದ ಜನವಿರೋಧಿ ನಿರ್ಣಯಗಳನ್ನು ಗಮನಿಸಿದ್ದು, ಈ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುವೆ ಎಂದಿದ್ದಾರೆ.
ಆದರೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಇದುವರೆಗೂ ಯಾವುದೇ ಮಹತ್ವದ ಸಭೆ ನಡೆಸಿಲ್ಲ. ಮುಂದಿನ ದಿನಗಳಲ್ಲಾದರೂ ಉಳಿದ ಉಪಚುನಾವಣೆಗಳ ಜೊತೆಗೆ ಗ್ರಾಮ ಪಂಚಾಯತ್ ಚುನಾವಣೆಯತ್ತಲೂ ಗಮನ ಹರಿಸಿದರೆ ಬಿಜೆಪಿಗೆ ಇನ್ನಷ್ಟು ಒತ್ತಡ ಹೆಚ್ಚಿಸಿದಂತೆ ಆಗಲಿದೆ. ಚುನಾವಣೆಗೆ ಮುನ್ನವೇ ಶೇ.70 ರಿಂದ ಶೇ.80ರಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಬೀಗುತ್ತಿರುವ ಬಿಜೆಪಿ ನಾಯಕರಿಗೆ ಒಂದು ಉತ್ತರ ಕೊಟ್ಟಂತೆ ಆಗಲಿದೆ. ಇರುವ ಅತ್ಯಲ್ಪ ಸಮಯದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಗ್ರಾಮ ಪಂಚಾಯತ್ ಚುನಾವಣೆಗೆ ತಂತ್ರಗಾರಿಕೆ ಹೆಣೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.