ಬೆಂಗಳೂರು : ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಇದೀಗ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾಜೀವ್ ಗಾಂಧಿ ಹಾಗೂ ವಿಕ್ಟೋರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಸರಿಯಾದ ಸೌಕರ್ಯವಿಲ್ಲ. ಅವ್ಯವಸ್ಥೆಗಳ ಆಗರ ರಾಜೀವ್ ಗಾಂಧಿ ಆಸ್ಪತ್ರೆ ಎಂದು ಆರೋಪಿಸಲಾಗಿದೆ.
ಊಟ, ತಿಂಡಿ ಮುಂತಾದ ಯಾವುದೇ ಸೌಕರ್ಯ ಸರಿಯಿಲ್ಲ. ಕೊರೊನಾ ಸೋಂಕು ತಗುಲಿ ಒದ್ದಾಡುತ್ತಿದ್ರೂ ಸರಿಯಾದ ಸವಲತ್ತುಗಳಿಲ್ಲದೇ ನಾವೆಲ್ಲಾ ಪರದಾಡುತ್ತಿದ್ದೇವೆ. ಆರೋಗ್ಯ ಮಂತ್ರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲೂ ರೋಗಿಗಳಿಗೆ ಕಳಪೆ ಆಹಾರ ನೀಡಲಾಗುತ್ತಿದೆ. ಅನೇಕ ರೋಗಿಗಳು ಆಹಾರ ಸೇವಿಸುವುದನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊರೊನಾ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತೆ. ಪೌಷ್ಠಿಕಾಂಶ ಉಳ್ಳ ಹಾರ ನೀಡುವುದು ಬಿಟ್ಟು, ಅರ್ಧ ಬೆಂದಿರುವ ಅನ್ನ, ನೀರಾಗಿರೋ ಸಾಂಬಾರು, ಗಟ್ಟಿಯಾಗಿರೋ ಚಪಾತಿ ನೀಡುತ್ತಿದ್ದಾರೆ. ಎರಡೇ ಎರಡು ಇಡ್ಲಿ ಕೊಡುತ್ತಿದ್ದಾರೆ. ಅದು ನಮ್ಮ ಹೊಟ್ಟೆಗೆ ಸಾಲುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ.
ಒಂದು ಕಡೆ ಸಚಿವರು ನಮ್ಮ ಎಲ್ಲಾ ಆಸ್ಪತ್ರೆಗಳು ಸುವ್ಯವಸ್ಥಿತವಾಗಿವೆ ಅಂತಾರೆ. ಆದರೆ, ಆಸ್ಪತ್ರೆಯಲ್ಲಿ ಸಮಸ್ಯೆಗಳ ಆಗರವೇ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಏರುತ್ತಲಿದೆ. ಹೀಗಿರುವಾಗ ಕಳಪೆ ಆಹಾರದ ಸುದ್ದಿ ಮತ್ತಷ್ಟು ಜನರನ್ನು ಆತಂಕಕ್ಕೆ ದೂಡುತ್ತಿದೆ.