ಬೆಂಗಳೂರು: ನ.25 ರಂದು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಲಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಬಿಐನಿಂದ ನೋಟಿಸ್ ಬಂದಿದೆ. ನ.23ಕ್ಕೆ ಹಾಜರಾಗಲು ತಿಳಿಸಿದ್ದಾರೆ. ಆದರೆ ಅಂದು ಸಾಧ್ಯವಾಗುವುದಿಲ್ಲ, 25ಕ್ಕೆ ಹಾಜರಾಗುತ್ತೇನೆ ಎಂದು ತಿಳಿಸಿದ್ದೇನೆ ಎಂದರು.
ನ.19 ರಂದು ಸಿಬಿಐ ನಿಂದ ಸಮನ್ಸ್ ಬಂದಿದೆ. ಆದರೆ, ಅದಕ್ಕಿಂತ ಮೊದಲು ರಾಜ್ಯ ಪ್ರವಾಸ ನಿಗದಿಯಾಗಿರುವ ಹಿನ್ನೆಲೆ ದೆಹಲಿಯಲ್ಲಿರುವ ಸಿಬಿಐ ಕಚೇರಿ ವಿಚಾರಣೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪ್ರವಾಸದಿಂದ 25 ಬೆಳಗ್ಗೆ ಬೆಂಗಳೂರಿಗೆ ಬರಲಿದ್ದೇನೆ. ಅಂದು ಸಂಜೆ 4 ಗಂಟೆಗೆ ಬೆಂಗಳೂರಿನ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ನಾಳೆಯಿಂದ ನನ್ನ ಉತ್ತರ ಕರ್ನಾಟಕ ಪ್ರವಾಸ ಇದೆ. ನ.19ನೇ ತಾರೀಖು ನಾನು ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದೆ. ಆಗ ನಮ್ಮ ಕಚೇರಿಗೆ ಬಂದು ಸಿಬಿಐ ಅಧಿಕಾರಿಗಳು ಸಮನ್ಸ್ ಕೊಟ್ಟು ಹೋಗಿದ್ದಾರೆ ಎಂದು ಹೇಳಿದರು.