ಬೆಂಗಳೂರು: ದೇವರ ದರ್ಶನ ಮುಗಿಸಿ ವಾಪಸ್ ಆಗುತ್ತಿದವರ ಕಾರೊಂದು ಮುಂಜಾನೆ ವೇಳೆ ಎಚ್‌ಎಸ್‌ಆರ್ ಬಡಾವಣೆ ವರ್ತುಲ 5ನೇ ಅಡ್ಡರಸ್ತೆ ಬಳಿ ಭೀಕರ ಅಪಘಾತಕ್ಕೆ ತುತ್ತಾಗಿದೆ. ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಸ್ಥಿತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕ್ಕಕಲ್ಲಸಂದ್ರದ ಕೃಷ್ಣಮೂರ್ತಿ (60) ಮತ್ತು ಬಸವನಗುಡಿಯ ಪ್ರಕಾಶ್ ಹೆಬ್ಬಾರ್ (58) ಸಾವನ್ನಪ್ಪಿದ್ದು, ಚಾಲಕ ವೆಂಕಟೇಶ್ ಮತ್ತು ಸಮೀರ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಾಲ್ವರು ಸ್ನೇಹಿತರು ಶನಿವಾರ ಕಾರಿನಲ್ಲಿ ತಿರುಪತಿಗೆ ತೆರಳಿ ಸಂಜೆ ದೇವರ ದರ್ಶನ ಮಾಡಿಕೊಂಡು ಭಾನುವಾರ ರಾತ್ರಿ ಬೆಂಗಳೂರಿನತ್ತ ಹೊರಟಿದ್ದರು. ವೆಂಕಟೇಶ್ ಎಂಬುವರು ಕಾರು ಚಾಲನೆ ಮಾಡುತ್ತಿದ್ದು, ಎಚ್‌ಎಸ್‌ಆರ್ ಲೇಔಟ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಎಡ ಭಾಗದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರು ಗಂಭಿರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆ ಸೇರುವ ಮುನ್ನವೇ ಕೃಷ್ಣಮೂರ್ತಿ ಮತ್ತು ಪ್ರಕಾಶ್ ಹೆಬ್ಬಾರ್ ಮೃತಪಟ್ಟಿದ್ದಾರೆ. ನಿದ್ದೆಯ ಮಂಪರಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿರುವವರ ಬಂಧನ: ಆಂಧ್ರಪ್ರದೇಶದಿಂದ ಮಾದಕ ಪದಾರ್ಥ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಡಿ.ಜೆ ಹಳ್ಳಿ ಠಾಣಾ ಪೊಲೀಸರು ಬರೊಬ್ಬರಿ 2.47 ಕೋಟಿ ಮೌಲ್ಯದ 413 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ನವಾಜ್ ಖಾನ್ ಹಾಗೂ ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳು.
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಫೈರೋಜ್ ಖಾನ್ ಹಾಗೂ ಪ್ರಸಾದ್ ಎಂಬಾತನಿಂದ ಗಾಂಜಾ ಖರೀದಿಸುತ್ತಿದ್ದ ಈ ಆರೋಪಿಗಳು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಟ್ಯಾನರಿ ರಸ್ತೆಯ ಈದ್ಗಾ ಮೈದಾನದ ಬಳಿ ದಂಧೆಯಲ್ಲಿ ತೊಡಗಿದ್ದ ನವಾಜ್ ಖಾನ್ ನನ್ನ ಬಂಧಿಸಿದ್ದ ಡಿ.ಜೆ.ಹಳ್ಳಿ ಪೊಲೀಸರ ತಂಡ ಆತನಿಂದ 3 ಲಕ್ಷ ರೂ ಮೌಲ್ಯದ 3.5 ಕೆ.ಜಿ ತೂಕದ ಗಾಂಜಾ ವಶಕ್ಕೆ ಪಡೆದುಕೊಂಡಿತ್ತು.
ಬಳಿಕ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಫೆಬ್ರವರಿ 27ರಂದು ಬೆಂಗಳೂರಿಗೆ ಗಾಂಜಾ ತಂದಿದ್ದ ಫೈರೋಜ್ ಖಾನ್ ಹಾಗೂ ಪ್ರಸಾದ್ ನ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಮತ್ತೊಬ್ಬ ಸ್ಥಳಿಯ ಆರೋಪಿ ಅಬ್ದುಲ್ ರೆಹಮಾನ್ ನನ್ನ 410 ಕೆ.ಜಿ ಗಾಂಜಾ ಸಮೇತ ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದರು. ಬಂಧಿತನ ವಿರುದ್ಧ ಬಾಣಸವಾಡಿ, ವೈಯಾಲಿಕಾವಲ್ ಠಾಣೆಗಳಲ್ಲಿ ಮಾದಕವಸ್ತು ಮಾರಾಟ ಹಾಗೂ ಕೊಲೆ ಪ್ರಕರಣಗಳಿದ್ದು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದರು.
ಇದನ್ನೂ ಓದಿ :ನೈಸ್ ರಸ್ತೆಯಲ್ಲಿ ಮಹಿಳಾ ಬೈಕ್ ರೈಡರ್ಸ್-ಸ್ಥಳೀಯ ವ್ಯಕ್ತಿಯ ನಡುವೆ ಗಲಾಟೆ; ಪೊಲೀಸರಿಗೆ ದೂರು