ಬೆಂಗಳೂರು : ಆನ್‌ಲೈನ್ ಜೂಜು ನಿಷೇಧಿಸುವ ಕುರಿತು ಸಚಿವ ಸಂಪುಟದ ಮುಂದೆ ಪ್ರಸ್ತಾಪವಿದೆ. ಈ ಕುರಿತು ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಆನ್‌ಲೈನ್ ಜೂಜು ನಿಷೇಧಿಸುವಂತೆ ಕೋರಿ ದಾವಣಗೆರೆ ನಿವಾಸಿ ಡಿ. ಶಾರದಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಆನ್‌ಲೈನ್ ಜೂಜು ರಾಜ್ಯದಲ್ಲಿಯೇ ನಡೆಯಬೇಕೆಂದಿಲ್ಲ. ದೇಶದ ಯಾವುದೇ ಮೂಲೆಯಿಂದಲೂ ಆನ್‌ಲೈನ್ ಮೂಲಕ ಬೆಟ್ಟಿಂಗ್ ಮಾಡಬಹುದಾಗಿದೆ. ಹೀಗಾಗಿ, ಅರ್ಜಿಯಲ್ಲಿ ಕೇಂದ್ರವನ್ನೂ ಪ್ರತಿವಾದಿಯಾಗಿಸಲು ಅನುಮತಿಸಬೇಕು ಎಂದರು.
ಓದಿ:ಆಪರೇಷನ್ ಕಮಲಕ್ಕೆ ಆಮಿಷ ಕೇಸ್: ಬಿಎಸ್ವೈ ವಿರುದ್ಧ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!
ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಆಲ್‌ಲೈನ್ ಜೂಜು ನಿಷೇಧಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದಿದೆ. ಈ ಬಗ್ಗೆ ಸದ್ಯದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಆನ್‌ಲೈನ್ ಜೂಜು ನಿಷೇಧಿಸುವ ಕುರಿತು ಸೂಕ್ತ ನಿರ್ಣಯ ಕೈಗೊಂಡು, ಈ ಕುರಿತ ವರದಿಯನ್ನು ಸಲ್ಲಿಸುವಂತೆ ನಿರ್ದೇಸಿಸಿ, ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿತು.