ಬೆಂಗಳೂರು: ಉದ್ಯಾನ ನಗರಿಯಲ್ಲಿ ಇಂದಿನಿಂದ ಬಿಎಂಟಿಸಿಯ ವೋಲ್ವೋ ಎಸಿ ಬಸ್ಗಳನ್ನ ರಸ್ತೆಗಿಳಿಸಲಾಗಿದೆ. ಬರೋಬ್ಬರಿ ಎರಡು ತಿಂಗಳ ನಂತರ ಬಸ್ಗಳ ಸಂಚಾರ ಆರಂಭವಾದ ಕಾರಣದಿಂದ ಇವುಗಳಿಗೆ ಪೂಜೆ ಮಾಡಿದ ದೃಶ್ಯ ಕಂಡು ಬಂತು. ಮೆಜೆಸ್ಟಿಕ್ನಿಂದ ಎಲ್ಲ ಎಸಿ ಬಸ್ಗಳು ಹೊರಡಲಿದ್ದು, 8 ಮಾರ್ಗಗಳಲ್ಲಿ ಸಂಚಾರ ಮಾಡಲಿವೆ.
ವೋಲ್ವೋ ಬಸ್ಗಳ ಸಂಚಾರ ಆರಂಭವಾಗಿದ್ದರೂ ಇದೀಗ ಬೆರಳೆಣಿಕೆಯಷ್ಟು ಜನ ಮಾತ್ರ ಸಂಚರಿಸುತ್ತಿದ್ದಾರೆ. ಇತ್ತ ಎಸಿ ಆಫ್ ಮಾಡಿದರೆ ಬಸ್ಗಳು ಮುಂದಕ್ಕೂ ಹೋಗೋದಿಲ್ಲ. ಯಾವಾಗಲೂ ಎಸಿ ಆನ್ನಲ್ಲೇ ಇರಬೇಕಾಗುತ್ತೆ. ಆದರೆ, ಇದರಿಂದಲೇ ಕೊರೊನಾ ಬರುತ್ತದೆಯೋ ಎಂಬ ಆತಂಕದಿಂದ ಪ್ರಯಾಣಿಕರು ಬಸ್ನತ್ತ ಮುಖ ಮಾಡುತ್ತಿಲ್ಲ.
ಆರ್ಥಿಕ ಹೊರೆ ಇಳಿಸಲು ಮುಂದಾದ ಬಿಎಂಟಿಸಿ: ಕಳೆದ ಎರಡು ತಿಂಗಳಿನಿಂದ ಸಾರಿಗೆ ನಿಗಮಗಳ ಆದಾಯವನ್ನು ಈ ಮಹಾಮಾರಿ ನುಂಗಿಹಾಕಿದೆ. ಸಿಬ್ಬಂದಿಗೆ ಸಂಬಳ ನೀಡಬೇಕು ಅಂದರೂ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿಗೆ ಕಷ್ಟವಾಗಿದೆ. ಹೀಗಾಗಿ ಆರ್ಥಿಕ ಹೊರೆ ಇಳಿಸಿಕೊಳ್ಳಲು ಹೊಸ ಪ್ಲಾನ್ ಮಾಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಎಲ್ಲ ಬಸ್ಗಳ ಕಾರ್ಯಾಚರಣೆ ಆಗ್ತಿಲ್ಲ. ಈ ನಿಟ್ಟಿನಲ್ಲಿ ಸಾರಿಗೆ ಸಿಬ್ಬಂದಿಗೆ ವೇತನ ರಹಿತ ರಜೆ ನೀಡಲು ತೀರ್ಮಾನ ಮಾಡಲಾಗುತ್ತಿದೆ.
ಶೇ 50 ರಷ್ಟು ಸಿಬ್ಬಂದಿಗೆ ಎರಡೂ ಮೂರು ತಿಂಗಳು ವೇತನ ರಹಿತ ಕೆಲಸ ನೀಡಲು ಚರ್ಚೆ ನಡೆಯುತ್ತಿದೆ. ಜನರು ಇಲ್ಲದೇ ಬಸ್ ಓಡಿಸುವುದರಿಂದ ನಷ್ಟ ಹೆಚ್ಚಾಗುತ್ತಿದೆ. ಹೀಗಾಗಿ, ಸಿಬ್ಬಂದಿಗೆ ಶೇ 50 ರಷ್ಟು ವೇತನ ಪಾವತಿ ಮಾಡಿ ಉಳಿದ ಮೊತ್ತವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಪ್ಲಾನ್ ಮಾಡಲಾಗುತ್ತಿದೆ.
ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ರವರೆಗೆ ಬಿಎಂಟಿಸಿ ಸಂಚಾರ: ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರದ ಸಮಯವನ್ನ ವಿಸ್ತರಣೆ ಮಾಡಲಾಗಿದ್ದು, ಬೆಳಗ್ಗೆ 5:00 ಗಂಟೆಯಿಂದ ಬಿಎಂಟಿಸಿ ಸಂಚಾರ ಆರಂಭವಾದರೆ, ರಾತ್ರಿ 9ರವರೆಗೆ ಬಸ್ ಸಂಚಾರ ಇರಲಿದೆ. 4 ನೇ ಹಂತದ ಲಾಕ್ ಡೌನ್ ಹಿನ್ನೆಲೆ ಬೆಳಗ್ಗೆ 7ರಿಂದ ರಾತ್ರಿ 7 ವರೆಗೆ ಮಾತ್ರ ಬಸ್ ಸಂಚಾರವಾಗುತ್ತಿತ್ತು. ಇದೀಗ 5 ನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ವ್ಯಾಪಾರ ವ್ಯವಹಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆ ರಾತ್ರಿ 9 ರವರೆಗೆ ಸಂಚಾರ ಇರಲಿದ್ದು, ಇನ್ನು ಈ ಹಿಂದಿನಂತೆ ಕಂಟೇನ್ಮೆಂಟ್ ಝೋನ್ನಲ್ಲಿ ಬಸ್ ಸಂಚಾರ ಇರೋದಿಲ್ಲ.