ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನ ಇದೇ ಮೊದಲ ಬಾರಿಗೆ ಜನರಿಲ್ಲದೆ ಸಂತಸ ವ್ಯಕ್ತವಾದಂತೆ ಕಂಡುಬರುತ್ತಿದೆ. ಇಲ್ಲಿಯವರೆಗೂ ವಾಹನ ದಟ್ಟಣೆ, ಗಿಜಿಗುಡುವ ಜನರ ಓಡಾಟ ಕಂಡಿದ್ದ ಪ್ರಾಣಿ ಪ್ರಪಂಚ ಇದೀಗ ಸೌಮ್ಯ ಶಾಂತವಾದ ನೈಜ ಪ್ರಕೃತಿಯ ಸವಿಯನ್ನ ಸವಿದಂತೆ ಭಾಸವಾಗುತ್ತಿದೆ.
ಈ ಸುಡು ಬೇಸಿಗೆಯಲ್ಲೂ ಕೊರೊನಾ ಭೀತಿಯಲ್ಲಿ ಜನರಿದ್ದರೆ, ಇತ್ತ ಉದ್ಯಾನದಲ್ಲಿ ಹಚ್ಚ ಹಸಿರಿನಲ್ಲಿ ತಣ್ಣಗೆ ಜೀವ ವೈವಿಧ್ಯತೆಯ ಕಲರವ ಕಾಣುವುದೇ ಸಂತಸದಿಂದ ಕೂಡಿದೆ. ಸುತ್ತಲೂ ಬಗೆಬಗೆಯ ಹಕ್ಕಿಗಳ ಇಂಚರದ ಕೂಗಿನ ನಡುವೆ ಇದೀಗ ಧರೆಗಿಳಿದ ನಕ್ಷತ್ರಗಳಂತೆ ಮಿನುಗುವ ರಂಗು ರಂಗಿನ ಚಿಟ್ಟೆಗಳ ಓಡಾಟ ಮದುವೆ ಮನೆಯಂತೆ ಕಂಡು ಬರುತ್ತಿದೆ.
ಕೀಟ ಪ್ರಪಂಚದಲ್ಲಿಯೇ ವಿಶಿಷ್ಟವಾಗಿ ರೂಪಾಂತರ ಸೂತ್ರವನ್ನು ಧರಿಸಿ ಒಂದೇ ಜೀವಿತಾವಧಿಯಲ್ಲಿ ತೆವಳುವ ಕೀಟವೊಂದು ಬಣ್ಣದ ರೆಕ್ಕೆಗಳೊಂದಿಗೆ ಮಾರ್ಪಟ್ಟು ಕ್ಷಣ ಕ್ಷಣಕ್ಕೂ ಚಂಚಲವಾಗಿ ನಲಿದಾಡುವುದನ್ನು ಕಂಡರೆ ಚೈತನ್ಯ ಉಕ್ಕಿಬರುತ್ತಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜನರಿಲ್ಲದ ಖಾಲಿ ಖಾಲಿ ಜಾಗಗಳಲ್ಲಿ ಹೆಚ್ಚು ಗುಂಪುಗಳಾಗಿ ವಲಸೆ ಬಂದಿರುವ ಚಿಟ್ಟೆಗಳು ಕಂಡು ಬಂದಿವೆ. ಸಾಮಾನ್ಯವಾಗಿ ಪಶ್ಚಿಮಘಟ್ಟಗಳಿಂದ ಪೂರ್ವದ ಕಡೆಗೆ ಮೋಡದ ನೆರಳಿನ ಕಡೆಗೆ ವಲಸೆ ಬರುವ ಈ ಚಿಟ್ಟೆಗಳು ಇತ್ತೀಚಿಗಿನ ಎರೆಡು ಮೂರು ದಿನಗಳಲ್ಲಿ ಉದ್ಯಾನವನ್ನು ಕಂಗೊಳಿಸಿವಂತೆ ರಂಗೇರಿಸಿವೆ.