ಬೆಂಗಳೂರು: ಕೇಂದ್ರ ಸರ್ಕಾರ ಅಗ್ನಿವೀರ್ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಕೇಂದ್ರ ಸರ್ಕಾರದ ಮಾಜಿ ರಕ್ಷಣಾ ಸಚಿವ ಪಲ್ಲಂರಾಜು ಹೇಳಿದ್ದಾರೆ. ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಯುವಕರ ಮಾತನ್ನು ಯಾಕೆ ಕೇಳುತ್ತಿಲ್ಲ? ಅವರೇಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು,
ಪ್ರಧಾನಿಯವರು ತಮ್ಮ ಅಹಂಕಾರವನ್ನು ಬಿಡಬೇಕು. ಇದೇ ರೀತಿಯ ಸೊಕ್ಕಿನಿಂದಾಗಿ ಚಳವಳಿ ನಿರತ 200 ರೈತರನ್ನು ಕಳೆದುಕೊಳ್ಳಬೇಕಾಯಿತು. ನಮ್ಮ ದೇಶದ ಹಿತಾಸಕ್ತಿ, ದೇಶದ ಭದ್ರತೆ ಮತ್ತು ನಮ್ಮ ಯುವಕರ ಭವಿಷ್ಯದ ದೃಷ್ಟಿಗಳಿಂದ ಆ ಇತಿಹಾಸ ಮರುಕಳಿಸಬಾರದು. ಈ ತುಘಲಕ್ ಸರ್ಕಾರವು ಮೊದಲು ಏನಾದರು ಮಾಡುತ್ತದೆ. ನಂತರ ಚಿಂತಿಸುತ್ತದೆ. ಬಹಳಷ್ಟು ತಿದ್ದುಪಡಿಗಳನ್ನು ಕಳೆದ ಕೆಲವು ದಿನಗಳಲ್ಲಿ ಮಾಡಲಾಗಿದೆ. ಆದರೆ, ಈ ದೇಶದ ಯುವಕರು ಯೋಜನೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರವು ಹಣ ಉಳಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಸರ್ಕಾರದ ಆದ್ಯತೆಯು ಖರ್ಚಿಗಿಂತ ದೇಶದ ರಕ್ಷಣೆಯಾಗಿರಬೇಕು. ಯುವಕರು, ಮಾಜಿ ಯೋಧರು, ರಕ್ಷಣಾ-ತಜ್ಞರೂ ಸೇರಿದಂತೆ ಸಂಬಂಧಿಸಿದ ಎಲ್ಲಾ ವಲಯಗಳೂ ಅಗ್ನಿಪಥ ಯೋಜನೆಯನ್ನು ತಿರಸ್ಕರಿಸಿವೆ. ಸೇವಾನಿರತ ಅಧಿಕಾರಿಗಳು ಕೂಡಾ ಖಾಸಗಿಯಾಗಿ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ನಾವು ಸೇನೆಯ ವಿರುದ್ಧ ಒಂದು ಶಬ್ಧವನ್ನೂ ಹೇಳುವುದಿಲ್ಲ. ನಮ್ಮ ಕಾಳಜಿಯು ಸೇನೆಯ ಕಲ್ಯಾಣದ ಕುರಿತಾಗಿದೆ ಎಂದರು.
ದೇಶದ ಸಶಸ್ತ್ರ ಪಡೆಯ ಮೇಲೆ ವ್ಯತಿರಿಕ್ತ ಪರಿಣಾಮ : ಅಗ್ನಿಪಥ್ ಯೋಜನೆಯು ಬಿಜೆಪಿ ಸರ್ಕಾರದ ಮತ್ತೊಂದು ದುರುದ್ದೇಶಪೂರಿತ ಅಡಚಣೆಯ ಸೃಷ್ಟಿ, ಇದರಿಂದಾಗಿ ದೇಶದ ಭದ್ರತೆಗೆ ಸಂಬಂಧಿಸಿದಂತೆ ಈಗಾಗಲೇ ಇರುವ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳು ಉಂಟಾಗಲಿವೆ. ಅಗ್ನಿವೀರರಿಗೆ ಕೇವಲ 6 ತಿಂಗಳ ಕಿರು ಅವಧಿಯ ತರಬೇತಿಯನ್ನು ನೀಡುವುದರಿಂದ ದೇಶದ ಸಶಸ್ತ್ರ ಪಡೆಯ ಗುಣಮಟ್ಟ, ದಕ್ಷತೆ ಮತ್ತು ಪರಿಣಾಮಕಾರಿತ್ವದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವುದು. ಎರಡು ವಿಭಿನ್ನ ರೀತಿಯ ವಿಭಿನ್ನ ವ್ಯವಸ್ಥೆ ಮತ್ತು ಭಿನ್ನ ವೇತನ ಹಾಗೂ ಸವಲತ್ತುಗಳು ಸಮಾನತೆಯ ಆಶಯಗಳಿಗೆ ಎಲ್ಲಾ ರೀತಿಯಲ್ಲಿಯೂ ವಿರುದ್ಧವಾಗಿದೆ. ಇದರಿಂದ, ಸಶಸ್ತ್ರ ಪಡೆಗಳಿಗೆ ಮತ್ತು ಅವುಗಳ ಶಿಸ್ತಿನ ಕುರಿತಂತೆ ಊಹಿಸಲಾಗದ ಸಮಸ್ಯೆಗಳು ಮುಂದಕ್ಕೆ ಎದುರಾಗಬಹುದು. ದೇಶದಲ್ಲಿ ಬಂಡವಾಳ ಹೂಡಿಕೆ ಆಗುತ್ತಿಲ್ಲ. ಉದ್ಯಮಗಳ ಸ್ಥಾಪನೆ ಆಗುತ್ತಿಲ್ಲ. ಆರ್ಥಿಕತೆ ಕುಸಿಯುತ್ತಿದೆ ಮತ್ತು ಜನರಿಗೆ ಉದ್ಯೋಗ ದೊರೆಯುತ್ತಿಲ್ಲ. ಕೋಟ್ಯಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ, ಬಿಜೆಪಿ ಸರ್ಕಾರವು ಸೊಕ್ಕಿನ ಮತ್ತು ನಿರ್ಲಕ್ಷ್ಯದ ಧೋರಣೆಯನ್ನು ಹೊಂದಿದೆ. ಸರಕಾರದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ೨ ಲಕ್ಷ ಸರ್ಕಾರಿ ಹುದ್ದೆಗಳು ಭರ್ತಿಯಾಗಿಲ್ಲ. ಅದರಲ್ಲಿ, ಕೇಂದ್ರ ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳ ಸಂಖ್ಯೆಯೇ 26 ಲಕ್ಷ ಇದೆ ಎಂದು ಹೇಳಿದರು.
ಕಾಂಗ್ರೆಸ್ ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ : ಅಕ್ಟೋಬರ್ 2020 ರಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್‌ರವರು ಸೈನಿಕರ ಮತ್ತು ಸೈನ್ಯಾಧಿಕಾರಿಗಳ ನಿವೃತ್ತಿಯ ವಯಸ್ಸನ್ನು ಏರಿಕೆ ಮಾಡುವ ಪ್ರಸ್ತಾಪ ಮಾಡಿದ್ದರು. ಈಗ ತರುತ್ತಿರುವ ಯೋಜನೆಯು ಅವರು ಹೇಳಿದ ನೀತಿಗೆ ಅವಮಾನವಲ್ಲವೇ? ಸಂದರ್ಶನವೊಂದರಲ್ಲಿ ಜನರಲ್ ಬಿಪಿನ್ ರಾವತ್ ಅವರು, ಸೈನಿಕರು 17 ವರ್ಷದ ಸೇವೆಯ ನಂತರ ನಿವೃತ್ತರಾಗುತ್ತಾರೆ. ಅವರ ನಿವೃತ್ತಿ ವಯಸ್ಸನ್ನು 58ಕ್ಕೆ ಏರಿಸಬೇಕು ಎಂದು ಹೇಳಿದ್ದರು. ಈ ಬಹುಮುಖ್ಯ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ರಾಷ್ಟ್ರವ್ಯಾಪಿ ಚಳುವಳಿಯನ್ನು ಮಾಡುತ್ತಿದೆ. ಪಕ್ಷವು ದೆಹಲಿಯ ಜಂತರ್ ಮಂತರ್ ಮತ್ತು ವಿವಿಧ ರಾಜ್ಯಗಳಲ್ಲಿ ಜೂ.22 ರಂದು ಶಾಂತಿಯುತ ಸತ್ಯಾಗ್ರಹಗಳನ್ನು ಮಾಡಿದೆ. ಪಕ್ಷದ ಸಂಸದರು ಸಂಸತ್ತಿನಿಂದ ಶಾಂತಿಯುತವಾದ ಪಾದಯಾತ್ರೆಯಲ್ಲಿ ಸಾಗಿ ಪಕ್ಷದ ಹಿರಿಯ ನಾಯಕರ ನಿಯೋಗವು ರಾಷ್ಟ್ರಪತಿಯವರಿಗೆ, ಈ ವಿವಾದಾತ್ಮಕವಾದ ಯೋಜನೆಯನ್ನು ಹಿಂಪಡೆಯುವಂತೆ ಮನವಿಯನ್ನು ಸಲ್ಲಿಸಿದೆ. ಪಕ್ಷವು ರಾಜಿಯಿಲ್ಲದ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದು ಜೂ.27 ರಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ದೇಶದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಮಧ್ಯಾಹ್ನ 11 ರಿಂದ 1 ಗಂಟೆಯ ವರೆಗೆ ಶಾಂತಿಯುತವಾದ ಸತ್ಯಾಗ್ರಹವನ್ನು ಮಾಡಲಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಹುಸಿ ಭರವಸೆಗಳಿಗೆ ಕಿವಿಕೊಡಬಾರದು : ಉದ್ಯೋಗ ಲಭಿಸುತ್ತದೆ ಎನ್ನುವ ವಿಚಾರ ಶುದ್ಧ ಸುಳ್ಳು. ವಾಸ್ತವವಾಗಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಇದುವರೆಗೆ ಪ್ರತಿವರ್ಷ 50 ಸಾವಿರದಿಂದ 80 ಸಾವಿರವರೆಗೆ ಸೇನೆಗೆ ನೇರ ನೇಮಕಾತಿ ಆಗುತ್ತಿತ್ತು. ಈಗ ಅದರ ಬದಲಿಗೆ ಅಗ್ನಿಪಥ್ ಯೋಜನೆಯನ್ನು ತರಲಾಗುತ್ತಿದೆ. ಇದರಿಂದಾಗಿ, ಸೈನ್ಯಕ್ಕೆ ನಿಯಮಿತ ನೇರ ನೇಮಕಾತಿ ಇರುವುದಿಲ್ಲ. ಕಳೆದೆರಡು ವರ್ಷಗಳಿಂದ ಬಾಕಿ ಇರಿಸಿದ್ದ ನೇಮಕಾತಿಗಳನ್ನು ಕೂಡಾ ರದ್ದು ಪಡಿಸಲಾಗಿದೆ. ಇದಕ್ಕೆ ಬದಲಾಗಿ ಮುಂದಕ್ಕೆ ಪ್ರತಿವರ್ಷ ಕೇವಲ 45 ಸಾವಿರ ದಿಂದ 50 ಸಾವಿರ ಗುತ್ತಿಗೆ ಆಧಾರಿತ ನೇಮಕಾತಿ ನಡೆಯಲಿದೆ. ಇವರ ಪೈಕಿ ಕಾಲು ಭಾಗ, ಅಂದರೆ, 12 ಸಾವಿರಕ್ಕಿಂತಲೂ ಕಡಿಮೆ ಜವಾನರು ಪ್ರತಿ ವರ್ಷ ಖಾಯಂಗೊಳ್ಳುತ್ತಾರೆ. ಈ ಯೋಜನೆಯು 15 ವರ್ಷಗಳ ಕಾಲ ಮುಂದುವರಿದರೆ, ನಮ್ಮ ಸೈನ್ಯದ ಬಲ 14 ಲಕ್ಷದಿಂದ 6ಲಕ್ಷಕ್ಕಿಂತಲೂ ಕಡಿಮೆಗೆ ಇಳಿಕೆಯಾಗಲಿದೆ. ಅದಲ್ಲದೆ, ಮಾಧ್ಯಮಗಳಲ್ಲಿ ವರದಿಯಾದಂತೆ, ಈ ಹಿಂದೆ ಘೋಷಿಸಲಾದ ಯೋಜನೆಗಳನ್ನು ರದ್ದು ಪಡಿಸಲಾಗಿದೆ. ಪರಿಣಾಮವಾಗಿ, ಈಗಾಗಲೆ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ 50 ಸಾವಿರ ಕ್ಕಿಂತಲೂ ಹೆಚ್ಚಿನ ಯುವಕರು ಮತ್ತೆ ಹೊಸತಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಅವರ ಇದುವರೆಗಿನ ಪ್ರಯತ್ನಗಳು ವ್ಯರ್ಥವಾಗುತ್ತದೆ ಎಂದ ಅವರು ಕೇಂದ್ರ ಸರ್ಕಾರ ಅನಗತ್ಯವಾಗಿ ಒಂದಿಷ್ಟು ಹುಸಿ ಭರವಸೆಗಳನ್ನು ಯೋಜನೆ ಅಡಿ ನೀಡುತ್ತಿದೆ. ಇದಕ್ಕೆ ಜನ ಬೆಲೆ ಕೊಡಬಾರದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ, ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.