ಬೆಂಗಳೂರು: ಮೊದಲನೇ ತರಗತಿಗೆ ಪ್ರವೇಶ ಪಡೆಯುವ ಮಗುವಿನ ವಯೋಮಿತಿ ಆರು ವರ್ಷ ಆಗಬೇಕು ಎಂಬ ನಿಯಮವನ್ನು 2025 - 26 ಸಾಲಿನಿಂದ ಜಾರಿಗೊಳಿಸುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ, ಒಂದನೇ ತರಗತಿಗೆ ಮಗು ಪ್ರವೇಶ ಪಡೆಯಲು 6 ವರ್ಷ ಆಗಬೇಕು ಎಂಬ ನಿಯಮವನ್ನು ಹೊಸದಾಗಿ ಜಾರಿಗೊಳಿಸಲಾಗಿದೆ. ಆದರೆ, ಇದನ್ನು ತಕ್ಷಣಕ್ಕೆ ಜಾರಿಗೆ ತರಲು ಸಾಧ್ಯವಿಲ್ಲ. ಹೀಗಾಗಿ 2025 -26ರಿಂದ ಇದನ್ನು ಜಾರಿಗೊಳಿಸುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ಒಂದನೇ ತರಗತಿಗೆ ಪ್ರವೇಶ ಪಡೆಯುವ ವಯೋಮಿತಿ ಆರಕ್ಕೆ ಏರಿಕೆ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಾಲಾ ಶಿಕ್ಷಣಕ್ಕೆ ಮಗು ಪ್ರವೇಶ ಪಡೆಯಲು 6 ವರ್ಷಗಳು ಪೂರ್ಣಗೊಂಡಿರುವುದು ಕಡ್ಡಾಯ. ಇದು ಸರ್ಕಾರದ ನಿರ್ಧಾರ ಮಾತ್ರವಲ್ಲದೇ ಶಿಕ್ಷಣ ತಜ್ಞರ ಸಲಹೆಯೂ ಆಗಿದೆ. ದೇಶದ 23 ರಾಜ್ಯಗಳು ಈಗಾಗಲೇ ಈ ನಿಯಮಗಳನ್ನು ಅಳವಡಿಸಿಕೊಂಡಿವೆ. ರಾಜ್ಯದಲ್ಲೂ ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಈ ನಿಯಮ ಅಳವಡಿಸಿಕೊಳ್ಳಲಾಗುವುದು. ಆ ಮಕ್ಕಳು ಎರಡು ವರ್ಷಗಳ ನಂತರ (2025-26) ಒಂದನೇ ತರಗತಿಗೆ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ ಎಂದರು.
ಕಲಿಕೆ ಸಾಮರ್ಥ್ಯ ವೃದ್ಧಿಸಲು ಸಾಮಾನ್ಯ ಪರೀಕ್ಷೆ: 2020ರಲ್ಲಿ ಕೋವಿಡ್ ಕಾಡಿದ ನಂತರ ಎರಡು ವರ್ಷದ ಬಳಿಕ ಶಾಲಾ ತರಗತಿಗಳು ಮೊದಲಿನಂತೆ ಆರಂಭವಾಗಿದೆ. ಆದರೆ, ಬಹಳಷ್ಟು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಶಾಲೆಗೆ ಬರುತ್ತಿಲ್ಲ. ಅವರ ಕಲಿಕಾಮಟ್ಟ ಮೌಲ್ಯಮಾಪನ ಮಾಡಲು, ಕಲಿಕೆಯ ಸಾಮರ್ಥ್ಯ ವೃದ್ಧಿಸಲು 5 ಮತ್ತು 8ನೇ ತರಗತಿಯಲ್ಲಿ ಸಾಮಾನ್ಯ ಪರೀಕ್ಷೆ ನಡೆಸುವ ಚಿಂತನೆ ಇದೆ. ಈ ಕುರಿತು ಸಭೆ ಕರೆಯಲಾಗಿದೆ. ಚರ್ಚೆಯ ನಂತರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನೂತನ ವೆಬ್ ಪೋರ್ಟಲ್ ಲೋಕಾರ್ಪಣೆ : ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಡಿ ನೂತನವಾಗಿ ಶಾಲಾ ಶಿಕ್ಷಣ ಸಚಿವರ ಜಾಲತಾಣ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯ 8 ಸೇವೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ತಂತ್ರಾಂಶಕ್ಕೆ ಸಚಿವ ಬಿ.ಸಿ. ನಾಗೇಶ್ ಇದೇ ವೇಳೆ, ಚಾಲನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಬಗ್ಗೆ ಅಗತ್ಯ ಮಾಹಿತಿ ಲಭ್ಯ : ಶಾಲಾ ಶಿಕ್ಷಣ ಇಲಾಖೆಯ ಕುರಿತು ಅಗತ್ಯ ಮಾಹಿತಿ ಒದಗಿಸುವ ನೂತನ ವೆಬ್ ಪೋರ್ಟಲ್ schooleducationminister.karnataka.gov.in ಅಭಿವೃದ್ಧಿಪಡಿಸಲಾಗಿದೆ. ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಶಿಕ್ಷಣ ಇಲಾಖೆಯ ನೌಕರರು ಇಲಾಖೆಗೆ ಸಂಬಂಧಿಸಿದ ಕುಂದು-ಕೊರತೆಗಳು, ದೂರುಗಳು, ಸಲಹೆಗಳು, ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಪೋರ್ಟಲ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ಪರಿಹರಿಸುವುದು ಮತ್ತು ದೂರಿನ ಸ್ಥಿತಿ - ಗತಿಯನ್ನು ಆನ್‌ಲೈನ್ ಮೂಲಕವೇ ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವ ನಾಗೇಶ್ ಮಾಹಿತಿ ನೀಡಿದರು.
ವೆಬ್ ಪೋರ್ಟಲ್‌ನಲ್ಲಿ ರಾಜ್ಯದಲ್ಲಿರುವ ಶಾಲೆಗಳ ಸಂಖ್ಯೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಖ್ಯೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಸೇರಿದಂತೆ ಇನ್ನಿತರ ವಿವರಗಳನ್ನು ಒದಗಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಅಧೀನದ ವಿವಿಧ ಇಲಾಖೆಗಳು, ವೆಬ್‌ಸೈಟ್ ಲಿಂಕ್ ಲಭ್ಯವಿದೆ ಎಂದು ಸಚಿವರು ತಿಳಿಸಿದರು.
ಕಲ್ಯಾಣ ನಿಧಿ ಸೇವೆಗಳು ಆನ್‌ಲೈನ್ : (http://kstbfonline.karnataka.gov.in) ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸದಸ್ಯತ್ವ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವೈದ್ಯಕೀಯ ಪರಿಹಾರ ಧನಸಹಾಯ, ಶಿಕ್ಷಕರ ಮಕ್ಕಳಿಗೆ ಉನ್ನತ ವ್ಯಾಸಂಗ ಧನ ಸಹಾಯ ಸೇರಿದಂತೆ ಇನ್ನಿತರ ಸೇವೆಗಳನ್ನು ಪಡೆದುಕೊಳ್ಳಲು ಶಿಕ್ಷಕರು ತಾವು ಕುಳಿತ ಸ್ಥಳದಿಂದಲೇ ಅರ್ಜಿ ಸಲ್ಲಿಸುವ ಮೂಲಕ ಸೇವೆ ಪಡೆದುಕೊಳ್ಳಬಹುದಾಗಿದೆ. ಶಿಕ್ಷಕರು ಈ ಸೇವೆಗಳಿಗಾಗಿ ಬೆಂಗಳೂರಿಗೆ ಬರುವುದು ತಪ್ಪಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿದೆ. ಎಲ್ಲ ಸೇವೆಗಳು ಸುಲಭವಾಗಿ ಲಭ್ಯವಾಗುವ ಜೊತೆಗೆ ಅನಗತ್ಯ ಅಲೆದಾಟ ಮತ್ತು ವಿಳಂಬ ತಪ್ಪಲಿದೆ ಎನ್ನುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಆರ್. ವಿಶಾಲ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ ಕಾವೇರಿ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಕರ್ನಾಟಕವನ್ನು ಕಾಂಗ್ರೆಸ್ನವರು ಎಟಿಎಂ ಮಾಡಿಕೊಂಡಿದ್ದರು : ಸಿಎಂ ಬೊಮ್ಮಾಯಿ ವಾಗ್ದಾಳಿ