ಬೆಂಗಳೂರು: ಆನ್ಲೈನ್ ಮೂಲಕ ಮದ್ಯ ಮಾರಾಟದ ಕುರಿತು ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲು ತಂಡ ರಚಿಸಲಾಗಿದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನ್ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಅಬಕಾರಿ ಆಯುಕ್ತ ಲೋಕೇಶ್ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಆನ್ಲೈನ್ನಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಧ್ಯಯನ ನಡೆಸಿ ಆ ಸಮಿತಿ ವರದಿ ನೀಡಿದ ನಂತರ ಅದರ ಸಾಧಕ-ಬಾಧಕಗಳ ಕುರಿತು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಅಬಕಾರಿ ಅಧಿಕಾರಿಗಳು ಕೈಜೋಡಿಸಲಿದ್ದಾರೆ. ಪೊಲೀಸ್ ಅಧಿಕಾರಿಗಳ ಜೊತೆ ಸೇರಿ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಸಲಾಗಿದೆ. ಕೇಂದ್ರ ವಲಯದ ಐಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳ ಜತೆ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದರು.
ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿ ಡ್ರಗ್ಸ್ ವಿಚಾರಗಳು ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯ ಗಮನಕ್ಕೆ ತರುವ ಕೆಲಸವನ್ನು ಅಬಕಾರಿ ಇಲಾಖೆ ಮಾಡುತ್ತದೆ ಎಂದು ಸಚಿವರು ತಿಳಿಸಿದರು.