ಬೆಂಗಳೂರು : ಖಾಸಗಿ ಶಾಲೆಗಳ ಕಟ್ಟಡಗಳು ಸುರಕ್ಷತಾ ಪ್ರಮಾಣ ಪತ್ರ ಹೊಂದಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಈ ಆದೇಶಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಗರಂ ಆಗಿದ್ದು, ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿದೆ.
ಈ ಕುರಿತು ಮಾತನಾಡಿದ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ, ಸರ್ಕಾರದ ಈ ಆದೇಶ ಭವಿಷ್ಯ ರೂಪಿಸುವ ಶಿಕ್ಷಕರ ಹಾಗೂ ಶಾಲೆಗಳ ಭವಿಷ್ಯವನ್ನೇ ತಲೆಕೆಳಗಾಗುವಂತೆ ಮಾಡಿದೆ. ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲಿವೆ.
ಸರ್ಕಾರವು ಕೋವಿಡ್ ಸಂಕಷ್ಟದಲ್ಲಿ ಖಾಸಗಿ ಶಾಲೆಗಳಿಗೆ ನೆರವು ನೀಡುವ ಬದಲಾಗಿ ಕಳೆದ 8 ತಿಂಗಳಿಂದ ಇಲ್ಲಸಲ್ಲದ ಕಿರುಕುಳವನ್ನು ನೀಡುತ್ತ ಬಂದಿದೆ ಎಂದು ಆರೋಪಿಸಿದ್ದಾರೆ. ಈ ವರ್ಷ ಸ್ನಾತಕೋತ್ತರ ಮತ್ತು ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಸುಮಾರು ಐದು ಸಾವಿರ ಶಾಲೆಗಳನ್ನು ಸರ್ಕಾರ ತಿರಸ್ಕರಿಸಿದೆ.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷಾ ನೆಪದಲ್ಲಿ ಖಾಸಗಿ ಶಾಲೆಗಳನ್ನೇ ಗುರಿಯಾಗಿಸಿಕೊಂಡು 10 ಸಾವಿರ ಶಾಲೆಗಳನ್ನು ಮುಚ್ಚಿಸುವ ಹುನ್ನಾತ ನಡೆಯುತ್ತಿದೆ. ಸರ್ಕಾರ ಹೊರಡಿಸಿರುವ ಆದೇಶ ಹಿಂಪಡೆಯಲು ಡಿಸೆಂಬರ್ 10ರವರೆಗೆ ಗಡುವು ನೀಡಿದ್ದೇವೆ. ಶಿಕ್ಷಣ ಇಲಾಖೆ ಸ್ಪಂದಿಸದಿದ್ರೆ, ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.