ಬೆಂಗಳೂರು : ಟೆಂಪೋ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಹಲಸೂರು ಗೇಟ್ ಸಂಚಾರಿ ಠಾಣೆಯ ವ್ಯಾಪ್ತಿಯ ಯುನಿಟಿ ಬಿಲ್ಡಿಂಗ್ ಬಳಿ ಬ್ರೇಕ್ ಫೇಲ್ಯೂರ್ ಆಗಿ ಫುಟ್‌ಪಾತ್ ಮೇಲಿನ ಮರಕ್ಕೆ ಟೆಂಪೋ ಗುದ್ದಿದೆ. ಅದೃಷ್ಟವಶಾತ್ ಸಾವು-ನೋವು ಉಂಟಾಗಿಲ್ಲ. ಸಿಟಿ ಮಾರ್ಕೆಟ್ನಿಂದ ಟೌನ್ಹಾಲ್ ದಾಟಿ ಯುನಿಟಿ ಸರ್ಕಲ್ ಬಳಿ ಬರುತ್ತಿರುವಾಗ ಟೆಂಪೋ ಬ್ರೇಕ್ ಫೇಲ್ಯೂರ್ ಆಗಿದೆ.
ನಿಯಂತ್ರಣ ಕಳೆದುಕೊಂಡು ಮುಂದಿದ್ದ ವಾಹನಗಳಿಗೆ ಅಪಘಾತವಾಗುವ ಸಾಧ್ಯತೆಯಿತ್ತು. ಈ ವೇಳೆ ರಸ್ತೆಯ ಎಡಭಾಗಕ್ಕೆ ಸ್ಟೇರಿಂಗ್ ತಿರುಗಿಸಿ ಫುಟ್‌ಪಾತ್ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವನ್ನು ತಪ್ಪಿಸಿ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಬ್ರೇಕ್ ಕಂಟ್ರೋಲ್ ಮಾಡುವಾಗ ಬೈಕ್ ಸಮೇತ 65 ವರ್ಷದ ವ್ಯಕ್ತಿ ಟೆಂಪೋ ಅಡಿ ಸಿಲುಕಿದ್ದು, ಕೂಡಲೇ ಹಲಸೂರು ಗೇಟ್ ಸಂಚಾರಿ ಪೊಲೀಸರ ಸಹಾಯದಿಂದ ಅವರನ್ನು ರಕ್ಷಿಸಿದ್ದಾನೆ. ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಯುವಕರ ಮೇಲೆ ಕಠಿಣ ಕ್ರಮ : ಡಿಸಿಪಿ ವಿಕ್ರಮ ಆಮಟೆ