ಆನೇಕಲ್: ದೇವಾಲಯಗಳು, ಹೋಟೆಲ್ಗಳು, ಮಾಲ್ಗಳು ಕೇಂದ್ರ ಸರ್ಕಾರ ಮಾರ್ಗಸೂಚಿಗಳ ಅನ್ವಯ ಕಾರ್ಯ ನಿರ್ವಹಿಸುತ್ತಿವೆ. ನಿನ್ನೆಯಿಂದಲೇ ತೆರೆದಿರುವ ಸಾರ್ವಜನಿಕರಿಗೆ ದೇವಾಲಯಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪುನಾರಂಭಗೊಂಡಿವೆ.
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಪ್ರಮುಖ ದೇವಾಲಯಗಳಾದ ಶ್ರೀರಾಮ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ, ಚೌಡೇಶ್ವರಿ ಸ್ವಾಮಿ ದೇವಾಲಯ ಹಾಗೂ ರಾಮಕೃಷ್ಣಪುರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಯಗಳು ಸೇರಿದಂತೆ ಬಹುತೇಕ ದೇವಾಲಯಗಳು ಭಕ್ತರಿಗೆ ದೇವರ ದರ್ಶನ ಭಾಗ್ಯ ನೀಡಿವೆ.
ತೀರ್ಥ ಹಾಗೂ ಪ್ರಸಾದ ವಿನಿಯೋಗವನ್ನು ನಿಷೇಧಿಸಲಾಗಿದೆ. ದೇವಾಲಯಗಳಿಗೆ ಬರುತ್ತಿರುವ ಭಕ್ತರ ಸಂಖ್ಯೆ ವಿರಳವಾಗಿದ್ದು ಕೊರೊನಾ ಭಯದಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಓಡಾಡಲು ಕೊಂಚ ಹಿಂದೇಟು ಹಾಕುತ್ತಿದ್ದಾರೆ.
ಹೋಟೆಲ್ಗಳು ಸಹ ಬಹುತೇಕ ಓಪನ್ ಆಗಿದ್ದು, ಸರ್ಕಾರದ ನಿಯಮಾವಳಿಗಳ ಅನ್ವಯ ಶಿಸ್ತಿನಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆಯೇ ದೇವಾಲಯಗಳಲ್ಲಿ, ಹೋಟೆಲ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಗಗಳನ್ನು ಕೂಡಾ ಗುರ್ತಿಸಲಾಗಿದೆ. ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಹಾಗು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ.